ನಾವು ಸಿದ್ದರಾಮಯ್ಯರ ಪರ ಇರುವುದರಿಂದಲೇ ಇಷ್ಟೆಲ್ಲ ಮಾಡುತ್ತಿದ್ದಾರೆ : ರಾಜೆಂದ್ರ ರಾಜಣ್ಣ ಆಕ್ರೋಶ

ಬೆಂಗಳೂರು, ಸೆ. 2 : ನಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಇದ್ದೇವೆಂಬ ಕಾರಣಕ್ಕಾಗಿ ನಮಗೆ ಅನ್ಯಾಯ ಮಾಡಲಾಗಿದೆ. ನಾವು ಏನೇ ಆದರೂ ಸಿದ್ದರಾಮಯ್ಯನವರ ಪರವಾಗಿಯೇ ಇರುತ್ತೇವೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣರ ಪುತ್ರ ಹಾಗೂ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸೆಪ್ಟೆಂಬರ್ ಕ್ರಾಂತಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಂದಲೇ ಆರಂಭ ಆಗುತ್ತದೆ. ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಇದೇ ಆಗಿದೆ. ಇವರ ಟೀಂ ಬಿಜೆಪಿಗೆ ಹೋಗಬಹುದು. ಸಿಎಂ ಮಾಡುತ್ತೇವೆಂದರೆ ಇವರೆಲ್ಲ ಬಿಜೆಪಿಗೆ ಹೋಗಬಹುದು’ ಎಂದು ಬಾಲಕೃಷ್ಣ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಬಹಿರಂಗವಾಗಿ ನಮ್ಮ ತಂದೆಯವರನ್ನು(ಕೆ.ಎನ್ ರಾಜಣ್ಣ) ಬಿಜೆಪಿಯ ಯಾವುದೇ ನಾಯಕರು ಭೇಟಿ ಮಾಡಿಲ್ಲ. ರಾಜಣ್ಣ ಅವರನ್ನು ಪಿತೂರಿಯಿಂದ ರಾಜೀನಾಮೆ ಪಡೆದಿದ್ದಾರೆ. ಅದನ್ನು ಬಿಟ್ಟರೆ, ಭ್ರಷ್ಟಾಚಾರ ಮಾಡಿ ಸಚಿವ ಸ್ಥಾನ ಬಿಟ್ಟಿಲ್ವಲ್ಲಾ? ರಾಜಣ್ಣ ಅವರು ಕಾಂಗ್ರೆಸ್ ಪಕ್ಷದ ವಿರುದ್ದ ಎಂದೂ ಮಾತಾಡಿಲ್ಲ? ಎಂದು ರಾಜೇಂದ್ರ ರಾಜಣ್ಣ ಹೇಳಿದರು.
ನಾವು ಸಿದ್ದರಾಮಯ್ಯ ಪರ ಇದ್ದೇವೆ ಎಂದೇ ಇಷ್ಟೆಲ್ಲ ಮಾಡಿದ್ದಾರೆ. ನಮಗೆ ಆಗಿರೋ ಅನ್ಯಾಯದ ಪ್ರಕಾರ ಮತ್ತೆ ಸಚಿವ ಸ್ಥಾನ ಕೊಡಬೇಕು. ಪರಿಶಿಷ್ಟ ಪಂಗಡ (ಎಸ್.ಟಿ)ಕ್ಕೆ ಸೇರಿದ 15 ಮಂದಿ ಶಾಸಕರಿದ್ದಾರೆ. ಹೀಗಾಗಿ ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕು ಎಂದು ರಾಜೇಂದ್ರ ರಾಜಣ್ಣ ಆಗ್ರಹಿಸಿದರು.
ನಮಗೆ ಸಿದ್ದರಾಮಯ್ಯನವರ ಬೆಂಬಲದಿಂದಲೇ ಓಟು ಬರುತ್ತದೆ. ಇನ್ಯಾರದ್ದೋ ಮುಖ ತೋರಿಸಿದರೆ ನಮಗೆ ಮತಗಳು ಓಟು ಬರುವುದಿಲ್ಲ. ನಮ್ಮ ತಂದೆಯವರು ವಿಧಾನಸಭೆಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಎಂಬ ಆರೆಸ್ಸೆಸ್ ಗೀತೆ ಹಾಡಲಿಲ್ಲ, ಬಾಲ್ಯದಿಂದ ಚಡ್ಡಿ ಹಾಕಿಕೊಂಡು ಆರೆಸ್ಸೆಸ್ ಶಾಖೆಗಳಿಗೆ ಹೋಗಲಿಲ್ಲ’ ಎಂದು ರಾಜೇಂದ್ರ ರಾಜಣ್ಣ ಖಾರವಾಗಿ ಪ್ರತಿಕ್ರಿಯೆ ನೀಡಿದರು.







