ಬಂಡವಾಳ ಹೂಡಿಕೆಗೆ ಕರ್ನಾಟಕ ಹೇಳಿ ಮಾಡಿಸಿದ ರಾಜ್ಯ: ಕೇಂದ್ರ ಸಚಿವ ರಾಜನಾಥ್ ಸಿಂಗ್
‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶ-2025ಕ್ಕೆ ಚಾಲನೆ

ರಾಜನಾಥ್ ಸಿಂಗ್ | PC:x/@rajnathsingh
ಬೆಂಗಳೂರು : ‘ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ರಾಜ್ಯವಾಗಿದೆ. ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಂಗಳವಾರ ನಗರದ ಅರಮನೆ ಆವರಣದಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶ-2025’ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ನವೋದ್ಯಮ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದು ಬಣ್ಣಿಸಿದರು.
ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ವ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ. ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೆ ಕಾರಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ ಎಂದು ಅವರು ಹೇಳಿದರು.
ಬೆಂಗಳೂರಿನ ನಿರ್ಣಾಯಕ ಪಾತ್ರದಿಂದ ಭಾರತವು ವೈಮಾಂತರಿಕ್ಷ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ. ಮೂರು ದಿನಗಳ ಈ ಶೃಂಗಸಭೆಯು ಕರ್ನಾಟಕದ ಹೂಡಿಕೆ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದ್ದು, ಸುಮಾರು 10 ಲಕ್ಷ ಕೋಟಿ ರೂ.ಮೌಲ್ಯದ ಪ್ರಸ್ತಾವನೆಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕವು ‘ಜ್ಞಾನ ಮತ್ತು ಸಮೃದ್ಧಿಯ ಪರಿಪೂರ್ಣ ಮಿಶ್ರಣ’ ಹೊಂದಿರುವ ರಾಜ್ಯ. ತಂತ್ರಜ್ಞಾನದಲ್ಲಿ ಬೆಂಗಳೂರಿನ ನಾಯಕತ್ವವು ಭಾರತವನ್ನು ಡಿಜಿಟಲ್ ಆರ್ಥಿಕತೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ. ಭಾರತದ ತಂತ್ರಜ್ಞಾನ ರಾಜಧಾನಿಯಾಗಿ, ಬೆಂಗಳೂರು ದೇಶದ ಭವಿಷ್ಯವನ್ನು ಸೃಷ್ಟಿಸುತ್ತದೆ ಮತ್ತು ಜಾಗತಿಕ ಪ್ರಾಮುಖ್ಯತೆಗೆ ಏರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರವು ಹೂಡಿಕೆದಾರರ ಅನುಕೂಲಕ್ಕಾಗಿ ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ, ಹೂಡಿಕೆದಾರರ ಬಹಳಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಕಾಲಮಿತಿಯಲ್ಲಿ ಅವರಿಗೆ ಅಗತ್ಯವಿರುವ ಅನುಮತಿ ಸಿಗುವುದರಿಂದ, ಅಭಿವೃದ್ಧಿಯ ವೇಗವು ಹೆಚ್ಚಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು 20247ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
‘ಸರಕಾರಗಳು ಹಾಗೂ ಪಕ್ಷಗಳು ಬರುತ್ತವೆ, ಹೋಗುತ್ತವೆ. ಆದರೆ, ದೇಶ ಇರಬೇಕು’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದು, ಅವರೊಬ್ಬ ಮುತ್ಸದ್ಧಿ ನಾಯಕ ಎಂಬುದನ್ನು ತೋರಿಸುತ್ತದೆ ಎಂದು ರಾಜನಾಥ್ ಸಿಂಗ್ ಮೆಚ್ಚುಗೆ ಸೂಚಿಸಿದರು.
ಸಿದ್ದರಾಮಯ್ಯ ಅವರ ಕಾಲಿಗೆ ಇತ್ತೀಚೆಗೆ ಗಾಯವಾದ ವಿಷಯ ತಿಳಿಯಿತು. ಅವರನ್ನು ಈ ಕಾರ್ಯಕ್ರಮದಲ್ಲಿ ಭೇಟಿಯಾಗಿ ಸಂತೋಷವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ರಾಜಕೀಯ ರಂಗದಲ್ಲಿರುವ ನಾವು ನಮ್ಮ ಕಾಲನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ರಾಜನಾಥ್ ಸಿಂಗ್ ಹಾಸ್ಯ ಚಟಾಕಿ ಹಾರಿಸಿದರು.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕರ್ನಾಟಕವು ಪ್ರಗತಿಪರ ರಾಜ್ಯವಾಗಿದೆ. ತಂತ್ರಜ್ಞಾನ ಹಾಗೂ ಕೌಶಲ್ಯಭರಿತ ಯುವ ಮಾನವ ಸಂಪನ್ಮೂಲವು ಹೇರಳವಾಗಿದೆ. ಸರಕಾರವು ಹೂಡಿಕೆದಾರರಿಗೆ ಕಾಲಮಿತಿಯಲ್ಲಿ ಅಗತ್ಯವಿರುವ ಅನುಮತಿಗಳನ್ನು ನೀಡಿ, ರಸ್ತೆ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಕರ್ನಾಟಕವು ದೇಶದ ಅಭಿವೃದ್ಧಿಯಲ್ಲಿ ಮೊದಲಿನಿಂದಲೂ ಕೊಡುಗೆ ನೀಡುತ್ತಲೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯಿಂದ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಕರ್ನಾಟಕ ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಮಾದರಿ ರಾಜ್ಯವಾಗಲಿ ಹೊರಹೊಮ್ಮಲಿ ಎಂದು ಅವರು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಡಾ.ಎಂ.ಸಿ.ಸುಧಾಕರ್, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಡಾ.ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಕಿರಣ್ ಮಜುಂದಾರ್ ಷಾ, ಗೀತಾಂಜಲಿ ಕಿರ್ಲೋಸ್ಕರ್, ರಾಹುಲ್ ಬಜಾಜ್, ಶೇಷ ವರದರಾಜನ್, ಪ್ರಶಾಂತ್ ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು. ಅತಿಥಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶಾಲು ಹೊದಿಸಿ, ಕಾಣಿಕೆ ನೀಡಿ, ರಾಜ್ಯದ ಪರವಾಗಿ ಬರಮಾಡಿಕೊಂಡರು.
ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದ ರಾಜು, ನಸೀರ್ ಅಹ್ಮದ್, ಎನ್ಆರ್ಐ ಫೋರಂ ಕರ್ನಾಟಕದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
16 ದೇಶಗಳ ರಾಯಭಾರಿಗಳು ಭಾಗಿ: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳಲ್ಲದೆ, ಬಹ್ರೇನ್, ಕ್ಯೂಬಾ, ಇಟಲಿ, ನೇಪಾಳ, ಪೋಲೆಂಡ್, ಮಲೇಷ್ಯಾ, ಜಪಾನ್, ಕಾಂಗೋ, ಜಮೈಕಾ, ಫಿಜಿ, ಕಝಕಿಸ್ತಾನ್, ಮೊರಾಕ್ಕೊ, ಸಿಷೇಲ್ಸ್, ತಝಕಿಸ್ತಾನ್, ಟೋಗೋ ಹಾಗೂ ಜಿಂಬಾಬ್ವೆ ದೇಶಗಳ ರಾಯಭಾರಿಗಳು ಭಾಗವಹಿಸಿದ್ದಾರೆ.
40 ಸಾವಿರ ಕೋಟಿ ರೂ. ಹೂಡಿಕೆ: ಆನಂದ್ ಮಹೀಂದ್ರ
1960ರ ವೇಳೆಗೆ ತಾವು ತಮ್ಮ ತಂದೆ-ತಾಯಿಗಳೊಂದಿಗೆ ಕೊಡಗಿನ ಕುಟ್ಟದಲ್ಲಿ ಬೆಳೆದ ದಿನಗಳ ಅನುಭವಗಳನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರ, ಪಂಜಾಬಿನವರಾದ ತಾವು ಇಲ್ಲಿನ ಕಾಫಿ ಪ್ಲಾಂಟೇಶನ್ ನಲ್ಲಿ ಕಲಿತ ಪಾಠಗಳನ್ನೇ ಉದ್ಯಮದಲ್ಲೂ ಅಳವಡಿಸಿಕೊಂಡಿರುವುದಾಗಿ ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ತಾವು ರಾಜ್ಯದಲ್ಲಿ ಮರುಬಳಕೆ ಇಂಧನ, ಪ್ರವಾಸ ಮತ್ತು ಆತಿಥ್ಯೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣೆ, ವಿದ್ಯುಚ್ಚಾಲಿತ ತ್ರಿಚಕ್ರ ವಾಹನ ತಯಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಅವರು ಘೋಷಿಸಿದರು.
ಮಹೀಂದ್ರ ಸಮೂಹವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ 5,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 6,000 ಕೋಟಿ ರೂ. ಹೂಡುವುದಾಗಿ ಅವರು ಪ್ರಕಟಿಸಿದರು.
1 ಲಕ್ಷ ಕೋಟಿ ರೂ.ಹೂಡಿಕೆ: ಸಜ್ಜನ್ ಜಿಂದಾಲ್
ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಿದೆ. ಇದರಲ್ಲಿ ಉಕ್ಕು ಉತ್ಪಾದನೆ ವಲಯದಲ್ಲಿ 45 ಸಾವಿರ ಕೋಟಿ ರೂ. ಮತ್ತು ಆತಿಥ್ಯೋದ್ಯಮ, ಸೌರವಿದ್ಯುತ್, ಪರಿಸರಸ್ನೇಹಿ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ 56 ಸಾವಿರ ಕೋಟಿ ರೂ. ಹೂಡಲಾಗುವುದು ಎಂದು ಉದ್ಯಮಿ ಸಜ್ಜನ್ ಜಿಂದಾಲ್ ಹೇಳಿದರು.







