ಅಸ್ಥಿರ ಭೌಗೋಳಿಕ ರಾಜಕೀಯ ಸ್ಥಿತಿಯಿಂದ ಉಂಟಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಿ: ಜಾಗತಿಕ ಮೂಲ ಸಲಕರಣೆ ತಯಾರಕರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೆಂಗಳೂರು: ಭಾರತೀಯ ರಕ್ಷಣಾ ಪರಿಸರ ವ್ಯವಸ್ಥೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ಇಂದಿನ ಅಸ್ಥಿರ ಭೌಗೋಳಿಕ ರಾಜಕೀಯ ಸ್ಥಿತಿಯಿಂದಾಗಿ ಉಂಟಾಗುತ್ತಿರುವ ಸವಾಲುಗಳಿಗೆ ಉದ್ದೇಶಿತ ಪರಿಹಾರಗಳನ್ನು ಕಂಡುಕೊಳ್ಳುವಂತೆ ಜಾಗತಿಕ ಮೂಲ ಸಲಕರಣೆ ತಯಾರಕರುಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ಕೊಟ್ಟಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ‘ಏರೋ ಇಂಡಿಯಾ 2025’ರ ಭಾಗವಾಗಿ ಆಯೋಜಿಸಲಾದ ಸಿಇಒಗಳ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭದ್ರತೆ ದುರ್ಬಲವಾಗಿದ್ದರೆ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಇಂದು ತಂತ್ರಜ್ಞಾನಗಳು ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತಿವೆ. ಇದರ ನಡುವೆಯೇ, ಭದ್ರತೆಗೆ ಸವಾಲು ಹಾಕುವ ಪರಿಸ್ಥಿತಿ ಇದ್ದು, ಇವುಗಳನ್ನು ಹಿಮ್ಮೆಟ್ಟಲು ನಿರಂತರವಾಗಿ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಭದ್ರತೆಯನ್ನು ಬಲಿಷ್ಠವಾಗಿಸಿದರೆ ಮಾತ್ರ ನಾವು ಉತ್ತಮ ಜಗತ್ತಿಗಾಗಿ ಕೆಲಸ ಮಾಡಲು ಸಾಧ್ಯ. ಇಂದು, ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸಂವಹನ ಮತ್ತು ದತ್ತಾಂಶ ಹಂಚಿಕೆಯ ಸ್ವರೂಪವು ಹೆಚ್ಚು ಸಂಕೀರ್ಣವಾಗುತ್ತಿದೆ. ಬಾಹ್ಯಾಕಾಶ ಆಧರಿತ ವ್ಯವಸ್ಥೆಗಳು, ಸಂವಹನ ಮತ್ತು ಕಣ್ಗಾವಲುಗಳ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ, ನಮ್ಮ ಕಾರ್ಯಾಚರಣೆಯ ಯೋಜನೆಗಳಲ್ಲಿ ಇವುಗಳ ಅಳವಡಿಕೆಯನ್ನು ಇನ್ನಷ್ಟು ಬಲಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
ಮಾನವಸಹಿತ, ಮಾನವರಹಿತ ಮತ್ತು ಸ್ವಾಯತ್ತ ಯುದ್ಧ ವ್ಯವಸ್ಥೆಗಳ ಸಮಗ್ರ ಪ್ರಯತ್ನಗಳ ಮೇಲೆ ಡ್ರೋನ್ಗಳ ಬಳಕೆಯ ಅಗತ್ಯತೆಯನ್ನು ಇತ್ತೀಚಿನ ಸಂಘರ್ಷಗಳು ನಮಗೆ ತೋರಿಸಿಕೊಟ್ಟಿವೆ. ಆದುದರಿಂದ, ನಮ್ಮ ರಕ್ಷಣಾ ಉತ್ಪಾದನೆಯು ಈ ಉದಯೋನ್ಮುಖ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಡೆಯಬೇಕಿದೆ. ಇವುಗಳತ್ತ ನಾವು ದೃಷ್ಟಿ ಇಡಬೇಕಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ನಮ್ಮ ಜನರು ಮತ್ತು ಪ್ರದೇಶವನ್ನು ಪ್ರತಿಕೂಲ ವಾತಾವರಣದಲ್ಲಿ ರಕ್ಷಿಸುವ ನೈತಿಕ ಜವಾಬ್ದಾರಿ ನಮಗಿದೆ. ಇದನ್ನು ಸಾಧಿಸಲು, ನಮ್ಮ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಮತ್ತು ಬಲವಾದ, ಪರಿಣಾಮಕಾರಿ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ದೇಶವನ್ನು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ನಾವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ನುಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಪಾರದರ್ಶಕ ಮತ್ತು ಉದ್ಯಮ ಸ್ನೇಹಿ ನಿಯಮಗಳು, ಪ್ರಕ್ರಿಯೆಗಳು ಮತ್ತು ನೀತಿಗಳನ್ನು ಜಾರಿಗೆ ತಂದಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಕರೆಸಿಕೊಳ್ಳುತ್ತಿರುವ ಭಾರತವು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಕ್ಕೆ ಪರಿವರ್ತನೆಗೊಳ್ಳಲು ಅನುಕೂಲವಾಗುವಂತೆ ದೇಶೀಯ ರಕ್ಷಣಾ ಉದ್ಯಮವನ್ನು ರಾಷ್ಟ್ರೀಯ ಆರ್ಥಿಕತೆಯ ಪ್ರಮುಖ ಅಂಶವನ್ನಾಗಿ ಮಾಡಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಹೊಸ ರಕ್ಷಣಾ ಪರವಾನಗಿಯನ್ನು ಬಯಸುವ ಕಂಪನಿಗಳಿಗೆ ಸ್ವಯಂಚಾಲಿತ ಮಾರ್ಗದ ಮೂಲಕ ಶೇ.75ವರೆಗೆ ಎಫ್ಡಿಐ ಅನ್ನು ಅನುಮತಿಸಿದ್ದೇವೆ. ಇಲ್ಲಿಯವರೆಗೆ ರಕ್ಷಣಾ ವಲಯದಲ್ಲಿ ಒಟ್ಟು 46 ಜಂಟಿ ಉದ್ಯಮಗಳು ಮತ್ತು ಕಂಪನಿಗಳಿಗೆ ವಿದೇಶಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವ ಮಾಹಿತಿ ನೀಡಿದರು.
ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ಥಾಪಿಸಲಾದ ರಕ್ಷಣಾ ಕೈಗಾರಿಕಾ ಕಾರಿಡಾರ್ಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಇದುವರೆಗೆ 250ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 6-8 ಗ್ರೀನ್ಫೀಲ್ಡ್ ಪರೀಕ್ಷೆ ಮತ್ತು ಪ್ರಮಾಣೀಕರಣ ಸೌಲಭ್ಯಗಳನ್ನು ಸ್ಥಾಪಿಸಲು ವೈಮಾನಿಕ ಮತ್ತು ರಕ್ಷಣಾ ವಲಯಕ್ಕೆ ಆರ್ಥಿಕ ನೆರವು ನೀಡಲು ಪರಿಚಯಿಸಲಾದ ರಕ್ಷಣಾ ಪರೀಕ್ಷಾ ಮೂಲಸೌಕರ್ಯ ಯೋಜನೆಯ ಬಗ್ಗೆ ಅವರು ಇದೇ ವೇಳೆ ಪ್ರಸ್ತಾಪಿಸಿದರು.
ರಕ್ಷಣಾ ರಫ್ತು ಕೇಂದ್ರವಾಗಿ ಭಾರತ ಹೊರಹೊಮ್ಮಿರುವುದಕ್ಕೆ ಸಾಕ್ಷಿಯಾಗಿ, 2013-14ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಉತ್ಪನ್ನಗಳ ರಫ್ತಿನಲ್ಲಿ ಭಾರತ 31 ಪಟ್ಟು ಬೆಳವಣಿಗೆಯನ್ನು ಕಂಡಿದೆ. ರಕ್ಷಣಾ ವಲಯದಲ್ಲಿ ನಾವೀನ್ಯತೆ ಯೋಜನೆಗಳಿಗಾಗಿ, 500 ಕ್ಕೂ ಹೆಚ್ಚು ಸ್ಟಾರ್ಟ್-ಅಪ್ಗಳು ಮತ್ತು ಎಂ.ಎಸ್.ಎಂ.ಇ.ಗಳು ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಭಾರತವು ಇಂದು ವಿಶ್ವದ ಮೂರನೆಯ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಶೇ.10-12ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ನಾವು ಹೆಚ್ಚು ಕೌಶಲಪೂರ್ಣ ಕಾರ್ಯಪಡೆಯ ಯುವ ಪೀಳಿಗೆಯನ್ನು ಹೊಂದಿದ್ದೇವೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಭಾರತವನ್ನು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಕಲ್ಪನೆಯು ಬೇರೂರಲು ಸಿಇಒಗಳ ದುಂಡುಮೇಜಿನ ಸಭೆ ವೇದಿಕೆಯಾಗಿದೆ. ಸಹಕಾರದ ಮನೋಭಾವದಲ್ಲಿ ಪ್ರಪಂಚದಾದ್ಯಂತದ ಅತ್ಯುತ್ತಮ ಸಂಸ್ಥೆಗಳೊಂದಿಗೆ ಕೈಜೋಡಿಸುವ ಸರಕಾರದ ಗಂಭೀರ ಉದ್ದೇಶವನ್ನು ಇದು ಪ್ರತಿಬಿಂಬಿಸುತ್ತದೆ. ಭಾರತವನ್ನು ಪ್ರಮುಖ ರಕ್ಷಣಾ ತಯಾರಕ ಮತ್ತು ಸೇವಾ ಪೂರೈಕೆದಾರನನ್ನಾಗಿ ಮಾಡಲು ಹೇಗೆ ಕೈಜೋಡಿಸುವುದು ಎಂಬುದನ್ನು ಅನ್ವೇಷಿಸುವುದು ಈ ಸಮಾವೇಶದ ಸಾರವಾಗಿದೆ ಎಂದು ಅವರು ಹೇಳಿದರು.
ದುಂಡುಮೇಜಿನ ಸಭೆಯಲ್ಲಿ 19 ದೇಶಗಳ (ಅಮೆರಿಕ, ಫ್ರಾನ್ಸ್, ರಷ್ಯಾ, ದಕ್ಷಿಣ ಕೊರಿಯಾ, ಇಂಗ್ಲೆಂಡ್, ಜಪಾನ್, ಇಸ್ರೇಲ್ ಮತ್ತು ಬ್ರೆಝಿಲ್ ಇತ್ಯಾದಿ) ಜಾಗತಿಕ ಮೂಲ ಸಲಕರಣೆ ತಯಾರಕರು, 35 ಭಾರತೀಯ (ಲಾರ್ಸೆನ್ ಮತ್ತು ಟೂಬ್ರೊ, ಭಾರತ್ ಪೋರ್ಜ್ ಲಿಮಿಟೆಡ್, ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್, ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಅಶೋಕ್ ಲೇಲ್ಯಾಂಡ್ ಡಿಫೆನ್ಸ್) ಮತ್ತು 16 ರಕ್ಷಣಾ ಕ್ಷೇತ್ರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಏರ್ಬಸ್ (ಫ್ರಾನ್ಸ್), ಅಲ್ಟ್ರಾ ಮೆರಿಟೈಮ್ (ಯುಎಸ್ಎ), ಜಿಎನ್ಟಿ (ದಕ್ಷಿಣ ಕೊರಿಯಾ), ಜಾನ್ ಕಾಕೆರಿಲ್ ಡಿಫೆನ್ಸ್ (ಯುಕೆ), ಮಿತ್ಸುಬಿಷಿ (ಜಪಾನ್), ರಾಫೆಲ್ ಅಡ್ವಾನ್ಸ್ ಡಿಫೆನ್ಸ್ ಸಿಸ್ಟಮ್ (ಇಸ್ರೇಲ್), ಸಫ್ರಾನ್ (ಫ್ರಾನ್ಸ್) ಮತ್ತು ಲೈಬರ್ ಏರೋಸ್ಪೇಸ್ (ಫ್ರಾನ್ಸ್) ಸೇರಿದಂತೆ ಪ್ರಮುಖ ವಿದೇಶಿ ಒಇಎಂಗಳು ತಮ್ಮ ಭವಿಷ್ಯದ ಯೋಜನೆಗಳು, ಜಂಟಿ ಉದ್ಯಮಗಳು, ಸಹಯೋಗಗಳು, ಬಿಡಿಭಾಗಗಳ ಉತ್ಪಾದನೆಗಾಗಿ ಭಾರತೀಯ ಕಂಪೆನಿಗಳೊಂದಿಗೆ ಪಾಲುದಾರಿಕೆ, ಏರೋ-ಎಂಜಿನ್ಗಳ ಅಭಿವೃದ್ಧಿ, ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ ಸೌಲಭ್ಯಗಳ ಸ್ಥಾಪನೆ ಮತ್ತು ಆರ್ ಅಂಡ್ ಡಿ ಸೌಲಭ್ಯಗಳ ಸ್ಥಾಪನೆಯನ್ನು ಸಭೆಯಲ್ಲಿ ವಿವರಿಸಲಾಯಿತು.







