ನಟ, ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ನಿಧನ

ವಿಜಯಪುರ: ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಮತ್ತು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ (59) ಅವರು ಸೋಮವಾರ ಹೃದಯಾಘಾತದಿಂದ ನಿಧನರಾದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಪ್ರಸಕ್ತ ಇವರು ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು.
ಅ.12ರಂದು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆಯುತ್ತಿದ್ದ ಸಿನೆಮಾ ಶೂಟಿಂಗ್ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿದು ಬಂದಿದೆ.
ರಾಜು ತಾಳಿಕೋಟೆ ಅವರು ಕೇವಲ ನಟನಾಗಿರದೆ, ತಾಳಿಕೋಟಿಯ ಪ್ರಸಿದ್ಧ ‘ಖಾಸ್ಗತೇಶ್ವರ’ ನಾಟಕ ಮಂಡಳಿಯ ಮಾಲಕರೂ ಆಗಿದ್ದರು. ‘ಕಲಿಯುಗದ ಕುಡುಕ’, ’ಕುಡುಕರ ಸಾಮ್ರಾಜ್ಯ’, ಮತ್ತು ’ಅಸಲಿ ಕುಡುಕ’ ಅವರ ಪ್ರಖ್ಯಾತ ನಾಟಕಗಳಾಗಿದ್ದು, ಈ ನಾಟಕಗಳ ಆಡಿಯೊ ಕ್ಯಾಸೆಟ್‌ಗಳನ್ನೂ ಬಿಡುಗಡೆ ಮಾಡಿದ್ದಾರೆ.
ರಂಗಭೂಮಿಯಲ್ಲಿ ಅಪಾರ ಅನುಭವ ಪಡೆದ ನಂತರ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಹೆಂಡ್ತಿ ಅಂದರೆ ಹೆಂಡತಿ, ಪಂಜಾಬಿ ಹೌಸ್, ಮನಸಾರೆ, ಪಂಚರಂಗಿ, ಪರಮಾತ್ಮ, ಲಿಫ್ಟ್ ಕೊಡ್ಲಾ, ಜಾಕಿ, ಸುಗ್ರೀವ, ಕಳ್ಳ ಮಳ್ಳ ಸುಳ್ಳ, ಭೀಮಾತೀರದಲ್ಲಿ ಸೇರಿದಂತೆ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.
ಪ್ರಶಸ್ತಿಗಳು:
ರಾಜು ತಾಳಿಕೋಟೆ ಅವರಿಗೆ 2010ರಲ್ಲಿ ಸುವರ್ಣ ವಾಹಿನಿಯ ಬೆಸ್ಟ್ ಕಾಮಿಡಿ ಅವಾರ್ಡ್, 2011ರಲ್ಲಿ ಫಿಲ್ಮಫೇರ್ ಅವಾರ್ಡ್, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯಲ್ಲಿ ಪಾಪಿಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.







