ರಾಜ್ಯಸಭೆ ಚುನಾವಣೆ | ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಪ್ರಮುಖರು ಸಾಕ್ಷಿಯಾದರು.
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 134 ಸದಸ್ಯರನ್ನು ಹೊಂದಿದ್ದು, 5 ಮಂದಿ ಪಕ್ಷೇತರರು ಹಾಗೂ ಇತರ ಸದಸ್ಯರ ಬಲ ಹೊಂದಿದೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಇಬ್ಬರು ಸದಸ್ಯರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು 141 ಮತಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ 3, ವಿಧಾನ ಪರಿಷತ್ತಿನಲ್ಲಿ 4 ಸದಸ್ಯರನ್ನು ಚುನಾಯಿಸಿಕೊಳ್ಳಲು ಸುಲಭ ಅವಕಾಶಗಳಿವೆ.
ವಿಧಾನ ಪರಿಷತ್ತಿಗೆ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ ಅವರನ್ನು ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ. ಜೂ.18ರಂದು ರಾಜ್ಯಸಭೆಯ 4 ಹಾಗೂ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 7 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.






