ರಾಜ್ಯಸಭೆ ಚುನಾವಣೆ | ನಾಳೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ; ರಾಹುಲ್ ಗಾಂಧಿ ಉಪಸ್ಥಿತಿ

ರಾಹುಲ್ ಗಾಂಧಿ/ಮಲ್ಲಿಕಾರ್ಜುನ ಖರ್ಗೆ(PC : PTI)
ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ(ಜೂ.5) ಮಧ್ಯಾಹ್ನ 1.30ಕ್ಕೆ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಜೂ.18ರಂದು ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯ ಸಂಖ್ಯಾಬಲದ ಆಧಾರದಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬಹುದಾಗಿದೆ. ನಾಲ್ಕನೆ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಾಲಾಗಲಿರುವ ಮೂರು ಸ್ಥಾನಗಳ ಪೈಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಅಂತಿಮಗೊಂಡಿದ್ದು, ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಇನ್ನುಳಿದ ಎರಡು ಸ್ಥಾನಗಳಿಗೆ ಎಐಸಿಸಿ ವಕ್ತಾರ ಪವನ್ ಖೇರಾ, ಆಂಧ್ರಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ವೈ.ಎಸ್.ಶರ್ಮಿಳಾ ರೆಡ್ಡಿ ಅಥವಾ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಹೆಸರುಗಳು ಮುಂಚೂಣಿಯಲ್ಲಿವೆ.
ರಾಜ್ಯದಿಂದ ಚುನಾಯಿತರಾಗುವ ಅಭ್ಯರ್ಥಿಗಳು ಸ್ಥಳೀಯರೆ ಆಗಿರಬೇಕು. ಯಾವುದೆ ಕಾರಣಕ್ಕೂ ಬೇರೆ ರಾಜ್ಯದವರಿಗೆ ಮಣೆ ಹಾಕುವುದು ಬೇಡ ಎಂಬುದು ಇಲ್ಲಿನ ನಾಯಕರ ಆಗ್ರಹವಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಶರ್ಮಿಳಾ ರೆಡ್ಡಿಯನ್ನು ರಾಜ್ಯಸಭೆಗೆ ಚುನಾಯಿಸಲು ಕಾಂಗ್ರೆಸ್ ಹೈಕಮಾಂಡ್ ಉತ್ಸುಕವಾಗಿದೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಕೆ ಮಾಡಲು ಜೂ.8 ಅಂತಿಮ ದಿನವಾಗಿದ್ದು, ಜೂ.9ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂ.11ರಂದು ಕೊನೆಯ ದಿನವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇನ್ನುಳಿದ ಎರಡು ಸ್ಥಾನಗಳಿಗೆ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.






