‘ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಮ್ರಾ ಯಾತ್ರಿಕರಿಗೆ ತಕ್ಷಣ ನೆರವು ನೀಡಿ’ : ಕೇಂದ್ರ ಸಚಿವರಿಗೆ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಮನವಿ

ಮನ್ಸೂರ್ ಅಲಿ ಖಾನ್
ಹೊಸದಿಲ್ಲಿ : ಸೌದಿ ಅರೇಬಿಯಾದಲ್ಲಿ ವಿಮಾನ ಸಂಚಾರ ವ್ಯತ್ಯಯದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಉಮ್ರಾ ಯಾತ್ರಿಕರಿಗೆ ತಕ್ಷಣದ ನೆರವು ಒದಗಿಸಿ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಅವರು, ಸೌದಿ ಅರೇಬಿಯಾದಲ್ಲಿ ಸಾವಿರಾರು ಭಾರತೀಯ ಪ್ರಯಾಣಿಕರು ಹಾಗೂ ಉಮ್ರಾ ಯಾತ್ರಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತೀಚಿನ ವೈಮಾನಿಕ ದಾಳಿಗಳು ಮತ್ತು ಪ್ರಮುಖ ವಿಮಾನಯಾನ ಸೇವೆಗಳ ಸ್ಥಗಿತದಿಂದಾಗಿ ಯಾತ್ರಿಕರು ನಿಗದಿತ ಅವಧಿಗಿಂತ ಹೆಚ್ಚು ದಿನಗಳ ಕಾಲ ಅಲ್ಲಿಯೇ ಉಳಿಯುವಂತಾಗಿದೆ ಎಂದು ಗಮನ ಸೆಳೆದಿದ್ದಾರೆ.
ರಿಯಾದ್ನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಜಿದ್ದಾ, ದಮ್ಮಾಮ್ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿಯೂ ಭಾಗಶಃ ವ್ಯತ್ಯಯ ಉಂಟಾಗಿದೆ. ಸೌದಿಯಾ ಮತ್ತು ಫ್ಲೈನಾಸ್ನಂತಹ ವಿಮಾನಯಾನ ಸಂಸ್ಥೆಗಳು ಸೀಮಿತ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದರಿಂದ ಅನೇಕ ಯಾತ್ರಿಕರ ವಾಪಸಾತಿ ಟಿಕೆಟ್ಗಳು ಅವಧಿ ಮೀರುವಂತಾಗಿದೆ ಅಥವಾ ಪ್ರಯಾಣ ವಿಳಂಬವಾಗಿದೆ. ಇದರಿಂದ ವಸತಿ ಸೌಕರ್ಯದ ಕೊರತೆ ಹಾಗೂ ಹಣಕಾಸಿನ ಸಮಸ್ಯೆಗಳು ತೀವ್ರಗೊಂಡಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವವರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಲ್ಲಿ ಕೆಲವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ. ಮತ್ತೊಂದೆಡೆ, ಹಲವು ಖಾಸಗಿ ಉಮ್ರಾ ಪ್ರವಾಸ ನಿರ್ವಾಹಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಯಾತ್ರಿಕರೊಂದಿಗೆ ಸಂಪರ್ಕ ಮತ್ತು ಸಮನ್ವಯ ಸಾಧಿಸುವಲ್ಲಿ ತೊಂದರೆ ಉಂಟಾಗಿದೆ. ಇದರಿಂದ ವೀಸಾ ಅವಧಿ ಮೀರುವ ಹಾಗೂ ಕಾನೂನು ಸಮಸ್ಯೆಗಳನ್ನು ಎದುರಿಸುವ ಅಪಾಯವಿದೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.
ಭಾರತದಲ್ಲಿರುವ ಯಾತ್ರಿಕರ ಕುಟುಂಬಗಳು ತೀವ್ರ ಆತಂಕದಲ್ಲಿವೆ. ಮಕ್ಕಾ ಮತ್ತು ಜಿದ್ದಾದಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದರೂ, ಯಾತ್ರಿಕರು ಸ್ಥಳದಲ್ಲಿಯೆ ಸಮನ್ವಯ ಮತ್ತು ಸಂಪರ್ಕದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಮನವಿ: ಸಂಕಷ್ಟಕ್ಕೆ ಸಿಲುಕಿರುವ ಯಾತ್ರಿಕರು ಮತ್ತು ಖಾಸಗಿ ಪ್ರವಾಸ ನಿರ್ವಾಹಕರನ್ನು ತಕ್ಷಣ ಸಂಪರ್ಕಿಸಿ, ಸುರಕ್ಷಿತ ವಸತಿ, ಆಹಾರ, ವೈದ್ಯಕೀಯ ನೆರವು ಹಾಗೂ ಕಾನೂನು ಸಹಾಯ ಒದಗಿಸಬೇಕು. ಮಾನವೀಯ ನೆಲೆಯಲ್ಲಿ ಯಾತ್ರಿಕರನ್ನು ಆದಷ್ಟು ಬೇಗ ಭಾರತಕ್ಕೆ ಮರಳಿ ಕರೆತರಲು ಕ್ರಮ ಕೈಗೊಳ್ಳಬೇಕು. ಲೋಪವೆಸಗಿರುವ ಉಮ್ರಾ ಪ್ರವಾಸ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಈ ಸಂಬಂಧ ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ಗೆ ತಕ್ಷಣ ನಿರ್ದೇಶನ ನೀಡುವಂತೆ ಮನ್ಸೂರ್ ಅಲಿ ಖಾನ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಹಜ್ ಮತ್ತು ಉಮ್ರಾ ಯಾತ್ರೆಗಳ ಸೌಲಭ್ಯ ಕಲ್ಪಿಸುವುದು ಹಾಗೂ ಖಾಸಗಿ ಪ್ರವಾಸ ನಿರ್ವಾಹಕರ ನಿಯಂತ್ರಣದ ಜವಾಬ್ದಾರಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸೇರಿರುವುದರಿಂದ, ಈ ವಿಷಯದಲ್ಲಿ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕು ಅವರು ಆಗ್ರಹಿಸಿದ್ದಾರೆ.
ಹಜ್ ಸಮಿತಿಗಳಿಗೆ ಸೂಚನೆ: ಸಂಕಷ್ಟದಲ್ಲಿರುವ ಯಾತ್ರಿಕರ ಕುಟುಂಬಗಳಿಗೆ ನೆರವು ನೀಡುವಂತೆ ರಾಜ್ಯ ಹಜ್ ಸಮಿತಿಗಳಿಗೆ ತಕ್ಷಣ ಸಲಹೆ ನೀಡಬೇಕು. ಅಗತ್ಯವಿದ್ದಲ್ಲಿ, ಸಂಕಷ್ಟದಲ್ಲಿರುವ ಯಾತ್ರಿಕರಿಗೆ ಕಲ್ಯಾಣ ನಿಧಿಯಿಂದ ತುರ್ತು ಆರ್ಥಿಕ ನೆರವು ಒದಗಿಸುವುದನ್ನೂ ಪರಿಗಣಿಸಬೇಕು ಎಂದು ಮನ್ಸೂರ್ ಅಲಿ ಖಾನ್ ಕೋರಿದ್ದಾರೆ.






