ಕನಿಷ್ಠ ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ : ಕಾಂಗ್ರೆಸ್ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಮಲ್ಲಿಕಾರ್ಜುನ ಖರ್ಗೆ/ಸಿದ್ದರಾಮಯ್ಯ/ಡಿ.ಕೆ.ಶಿವಕುಮಾರ್
ಬೆಂಗಳೂರು : ಕರ್ನಾಟಕದಿಂದ ತೆರವಾಗುತ್ತಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ, ಆಡಳಿತರೂಢ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿರುವ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕನಿಷ್ಠ ಒಂದು ರಾಜ್ಯಸಭಾ ಸ್ಥಾನವನ್ನು ನೀಡಬೇಕು ಎಂದು 'ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ' ಆಗ್ರಹಿಸಿದೆ.
ಈ ಕುರಿತು ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಕರ್ನಾಟಕದ ಒಟ್ಟು 12 ರಾಜ್ಯಸಭಾ ಸದಸ್ಯರ ಪೈಕಿ ಒಬ್ಬರು ಮಾತ್ರ ಮುಸ್ಲಿಮರು. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಕನಿಷ್ಠ ಇಬ್ಬರು ಲೋಕಸಭಾ ಸದಸ್ಯರು ಮುಸ್ಲಿಮ್ ಸಮುದಾಯದಿಂದ ಇರುತ್ತಿದ್ದರು. ಆದರೆ ಈಗ ಮುಸ್ಲಿಮ್ ಸಮುದಾಯದಿಂದ ಒಬ್ಬೇ ಒಬ್ಬ ಲೋಕಸಭಾ ಸದಸ್ಯರು ಇಲ್ಲ. ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಕೊಡುವ ಲೋಕಸಭಾ ಟಿಕೆಟ್ ಸಂಖ್ಯೆಯೇ ಕೇವಲ ಒಂದಕ್ಕೆ ಇಳಿದಿದೆ. ರಾಜ್ಯಸಭಾ ಸದಸ್ಯರು ಒಬ್ಬರು ಮಾತ್ರ ಇದ್ದಾರೆ. ಸಂಸತ್ತಿನಲ್ಲಿ ರಾಜ್ಯದ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಕುಸಿದು ಹೋಗಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವಲ್ಲಿ ಮುಸ್ಲಿಮ್ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಹಾಕಿದೆ. ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿ ಅದು ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಆದರೆ ರಾಜ್ಯ ಸಚಿವ ಸಂಪುಟದಲ್ಲಿ, ಅಧಿಕಾರಶಾಹಿಯಲ್ಲಿ, ಸರಕಾರದ ಪ್ರಮುಖ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ನಿಗಮ ಮಂಡಳಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಅವರ ಜನಸಂಖ್ಯೆ ಹಾಗು ಅವರು ಕಾಂಗ್ರೆಸ್ ಗೆ ನೀಡಿರುವ ಬೆಂಬಲಕ್ಕೆ ಹೋಲಿಸಿದರೆ ತೀರಾ ಕಡಿಮೆಯಿದೆ. ಸಾಲದ್ದಕ್ಕೆ ಕಾಂಗ್ರೆಸ್ ಟಿಕೆಟ್ ಕೊಡುವ ಅತ್ಯುತ್ತಮ ಅವಕಾಶ ಇರುವಲ್ಲೂ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ಕೊಡುವುದಿಲ್ಲ ಎಂಬ ಸಂದೇಶ ಸಮುದಾಯಕ್ಕೆ ರವಾನೆಯಾಗಿದೆ ಎಂದು ಉಲ್ಲೇಖಿಸಿದೆ.
ʼಹಾಗಾಗಿ ಈ ಬಾರಿ ರಾಜ್ಯ ಸಭಾ ಚುನಾವಣೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಪಕ್ಷದ ಓರ್ವ ಮುಸ್ಲಿಮ್ ಮುಖಂಡರಿಗೆ ಕೊಟ್ಟು ಕಾಂಗ್ರೆಸ್ ಈ ಕೊರತೆಯನ್ನು ತುಂಬಬೇಕಾಗಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರತಿಪಾದಿಸಿರುವ ಆಶಯಗಳಿಗೂ ಇದು ಪೂರಕ ನಡೆಯಾಗಲಿದೆ. ಪಕ್ಷದ ಸಂಘಟನಾ ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಸಿಗುವಂತೆ ಅಲ್ಪಸಂಖ್ಯಾತ ಘಟಕ ಕಾರ್ಯನಿರ್ವಹಿಸಬೇಕು ಎಂದು ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿತ್ತು. ಹಾಗಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಪಕ್ಷ ಕನಿಷ್ಠ ಒಂದು ಸ್ಥಾನವನ್ನು ಮುಸ್ಲಿಮರಿಗೆ ಕೊಟ್ಟು ಪಕ್ಷದ ಉನ್ನತ ನಾಯಕತ್ವ ಹಾಗು ಸಿದ್ಧಾಂತದ ಆಶಯಗಳನ್ನು ಎತ್ತಿ ಹಿಡಿಯಬೇಕುʼ ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಪರವಾಗಿ ಸುಹೇಲ್ ಅಹ್ಮದ್ ಮರೂರ್, ತನ್ವಿರ್ ಅಹ್ಮದ್, ಯಹ್ಯಾ ದಾಮೂದಿ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






