ಕಾವೇರಿ ನೀರಿನ ಹಂಚಿಕೆ | ಸುಪ್ರೀಂ ತೀರ್ಪು ನೋಡಿಕೊಂಡು ನೀರು ಬಿಡುವುದು ತೀರ್ಮಾನ : ರಾಮಲಿಂಗಾರೆಡ್ಡಿ

ಬೆಂಗಳೂರು : ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರನ್ನು 15 ದಿನಗಳ ವರೆಗೆ ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿ ನಾಳೆ(ಆ.13) ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆ ಆ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕಾನೂನು ತಜ್ಞರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ. ಆದರೆ, 15 ದಿನಗಳವರೆಗೆ ದಿನನಿತ್ಯ 12 ಸಾವಿರ ಕ್ಯೂಸೆಕ್ ಬಿಡಲು ಪ್ರಾಧಿಕಾರ ಆದೇಶಿಸಿದೆ. ಗುರುವಾರ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿರುವ ತಮಿಳುನಾಡು ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರಕಾರ ತನ್ನ ಆಕ್ಷೇಪಣೆ ಸಲ್ಲಿಸಲಿದೆ. ನಮ್ಮ ವಕೀಲರು ಹಾಗೂ ತಜ್ಞರು ಈ ನಿಟ್ಟಿನಲ್ಲಿ ಸಜ್ಜಾಗಿದ್ದಾರೆ ಎಂದು ತಿಳಿಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 3,500 ಕ್ಯೂಸೆಕ್ ನೀರು ಬಿಡಲು ಹಿಂದೆ ಶಿಫಾರಸು ಮಾಡಿದ್ದಾಗ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ಇದೀಗ ಮುಂಗಾರು ಮಳೆ ಕೈಕೊಟ್ಟಿದೆ. ಮಲೆನಾಡು ಹೊರತಾಗಿ ಯಾವ ಜಿಲ್ಲೆಯಲ್ಲೂ ಮಳೆ ಇಲ್ಲ. ಅಂತರ್ಜಲದ ಸಮಸ್ಯೆ ಇದೆ. ಆದರೆ, ತಮಿಳುನಾಡಿನಲ್ಲಿ ಈ ಸಮಸ್ಯೆ ಇಲ್ಲ. ಅಲ್ಲಿ ಹಿಂಗಾರು ಮಳೆ ಆಗುತ್ತದೆ ಎಂದು ಅವರು ವಿವರಿಸಿದರು.
ನಮ್ಮ ಕಾನೂನು ತಜ್ಞರು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಬಲ ವಾದ ಮಾಡಿದ್ದಾರೆ. ಈ ಹಿಂದೆ ರಾಜ್ಯದ ಪರವಾಗಿ ವಾದ ಮಾಡಿದ ವಕೀಲರು ಹಾಗೂ ತಜ್ಞರೇ ವಾದ ಮಂಡಿಸಿದ್ದಾರೆ ಎಂದ ಅವರು, ಕಾವೇರಿ ವಿಚಾರವಾಗಿ ನಾವು ರೈತರ ಹಿತಾಸಕ್ತಿ ಕಾಪಾಡಿದ್ದೇವೆ. ರಾಜಕೀಯವಾಗಿ ಆರೋಪ ಮಾಡುವುದು ಸರಿಯಿಲ್ಲ ಎಂದರು.






