ಪಿಒಪಿ ಗಣೇಶ ಮೂರ್ತಿ ತಯಾರಿಸುವ, ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು: ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದಲ್ಲಿ ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ಮೂರ್ತಿಗಳನ್ನು ತಯಾರಿಸುವ ಅಥವಾ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಸಂಗ್ರಹಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಮೂರ್ತಿಗಳನ್ನು ತಯಾರಿಸುವ ಅಥವಾ ಮಾರಾಟ ಮಾಡುವವರಿಗೆ ನೋಟಿಸ್ ನೀಡಲಾಗುತ್ತದೆ. ನಂತರ ಮೂರ್ತಿಗಳನ್ನು ವಶಪಡಿಸಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ಒಂದೇ ಬಾರಿ ಬಳಕೆ ಮಾಡುವಂತಹ ಪ್ಲಾಸ್ಟಿಕ್ ಘಟಕಗಳನ್ನು ಪತ್ತೆ ಹಚ್ಚಬೇಕು. ನಂತರ ಘಟಕಗಳ ಪಟ್ಟಿ ಸಿದ್ಧಪಡಿಸಿ, ಉತ್ಪಾದನೆಯನ್ನು ತಕ್ಷಣ ನಿಲ್ಲಿಸುವಂತೆ ನೋಟಿಸ್ ನೀಡಬೇಕು. ಆದೇಶ ಪಾಲಿಸದ ಘಟಕಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ತಯಾರಿಕಾ ಘಟಕಗಳು ಹಾಗೂ ಪರಿಸರ ಸಂರಕ್ಷಣೆಯ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಅಗತ್ಯವಿರುವ ವಿದ್ಯುತ್ ಸಂಪರ್ಕ ಮತ್ತು ಬಳಕೆಗೆ ಸಂಬಂಧಿಸಿದ ವಿವರಗಳನ್ನು ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಅವರಿಂದ ಮಾಹಿತಿ ಪಡೆದು ಪಿಒಪಿ ಮೂರ್ತಿಗಳ ನಿಷೇಧ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಯ ಸಹಕಾರ ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗುತ್ತದೆ ಸಚಿವರು ಹೇಳಿದರು.






