ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ, ಅವರು ರಾಜೀನಾಮೆ ಹಿಂಪಡೆದಿದ್ದಾರೆ : ಸುರ್ಜೇವಾಲ

ರಾಮಲಿಂಗಾರೆಡ್ಡಿ \ ರಣದೀಪ್ ಸಿಂಗ್ ಸುರ್ಜೇವಾಲ(PTI)
ಬೆಂಗಳೂರು: ರಾಮಲಿಂಗಾರೆಡ್ಡಿ ಅವರ ಅನುಭವ, ಜಾಣ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯವಾದುದು. ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಬಗ್ಗೆ ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ಊಹಾಪೋಹ ಹರಡುತ್ತಿದ್ದಾರೆ. ರಾಮಲಿಂಗಾರೆಡ್ಡಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಜೊತೆಗೆ ಎನ್ಎಸ್ಯುಐ ಸಮಯದಿಂದಲೂ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
1973ರಿಂದ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ನಮ್ಮ ಪಕ್ಷದ ಕೆಲವು ನಾಯಕರು ಆಗ ಇನ್ನು ಹುಟ್ಟೇ ಇರಲಿಲ್ಲ. ಅವರು 1989ರಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. 8 ಬಾರಿ ಶಾಸಕರಾಗಿ, ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರ ಜೊತೆಗೆ ರಾಮಲಿಂಗಾರೆಡ್ಡಿ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಾಧ್ಯಮಗಳು ಅವರ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದಾಗ, ನಾನು ಸೇರಿದಂತೆ ಶಿವಕುಮಾರ್, ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚೆ ಮಾಡಿದ್ದೆವು ಎಂದು ಅವರು ತಿಳಿಸಿದರು.
ಕೆಲವು ತಪ್ಪು ಸಂವಹನದಿಂದಾಗಿ ರಾಮಲಿಂಗಾರೆಡ್ಡಿ ಅವರು ನಮ್ಮನ್ನು ಮತ್ತೊಮ್ಮೆ ಭೇಟಿ ಮಾಡಿದ್ದರು. ಅವರು ತಮ್ಮ ರಾಜೀನಾಮೆ ಹಿಂಪಡೆದಿರುವ ಬಗ್ಗೆ ಈಗಾಗಲೇ ನಿಮಗೆ ಮಾಹಿತಿ ನೀಡಿದ್ದಾರೆ. ಅವರು ಮುಂದೆಯೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕನಾಗಿ ಹಾಗೂ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟಪಡಿಸಿದರು.
ಬಿಜೆಪಿಗೆ ನಿರಾಸೆ: ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಸ್ತಾಂತರ ಸುಗಮವಾಗಿ ಸಾಗಿರುವುದರಿಂದ ಆಘಾತಕ್ಕೆ ಒಳಗಾಗಿರುವ ಬಿಜೆಪಿ, ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯುವ ನಿರೀಕ್ಷೆಯಲ್ಲಿತ್ತು. ಈ ಕಾರಣಕ್ಕೆ ಅವರು ವಿಕೆಟ್ ಬೀಳುತ್ತಿದೆ ಎಂದೆಲ್ಲ ಮಾತನಾಡಿದ್ದರು. ಆದರೆ ಅವರಿಗೆ ಈಗ ನಿರಾಸೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ವಿಜಯೇಂದ್ರ ಹಾಗೂ ಅಶೋಕ್ ಅವರೆ ನೀವು ಜನರ ಮುಂದೆ ನಿರಂತರವಾಗಿ ಕ್ಲೀನ್ ಬೋಲ್ಡ್ ಆಗಲಿದ್ದೀರಿ. ಜನರ ವಿಶ್ವಾಸ ಗಳಿಸಬೇಕಾದರೆ, ಪ್ರಾಮಾಣಿಕತೆ, ಬದ್ಧತೆ, ಜನರ ಸೇವೆ ಮಾಡಬೇಕು. ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅವುಗಳನ್ನು ಮಾಡಿಕೊಂಡು ಬಂದಿದೆ ಎಂದು ಅವರು ತಿರುಗೇಟು ನೀಡಿದರು.
ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಪ್ರಗತಿಯ ಹೊಸ ಯುಗ ಆರಂಭವಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.






