‘ಲೋಕಾಯುಕ್ತರು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಾಯ್ದೆ’ : ಕಾನೂನು ಸಚಿವ ಎಚ್.ಕೆ.ಪಾಟೀಲ್‍ಗೆ ಪರಿಷತ್ ಸದಸ್ಯ ರಮೇಶ್ ಬಾಬು ಪತ್ರ

ಬೆಂಗಳೂರು : ರಾಜ್ಯ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಸಾರ್ವಜನಿಕ ಹಿತ ದೃಷ್ಟಿಯಿಂದ ತಮ್ಮ ಆಸ್ತಿ ಮತ್ತು ದಾಯಿಕ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಾಯ್ದೆ ತರಬೇಕು ಎಂದು ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ರವಿವಾರ ಈ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‍ಗೆ ಪತ್ರ ಬರೆದಿರುವ ಅವರು, ಲೋಕಾಯುಕ್ತ ಕಾಯ್ದೆ ಅನ್ವಯ ಪ್ರತಿ ವರ್ಷ ವಿಧಾನ ಮಂಡಲದ ಸದಸ್ಯರು ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆ ಮಾಡಬೇಕಿದೆ. ಜೂ.30ರೊಳಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸದ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದಾರೆ.
ಅದೇ ರೀತಿ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು, ಉಪ ಲೋಕಾಯುಕ್ತರು ತಮ್ಮ ಆಸ್ತಿ ಪಟ್ಟಿಯನ್ನು ಪ್ರಕಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯಕವಾಗಿದೆ. 2021ರ ಜು.12ರಂದು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಸಾರ್ವಜನಿಕ ಹಿತ ದೃಷ್ಟಿಯಿಂದ ತಮ್ಮ ಆಸ್ತಿ ಮತ್ತು ದಾಯಿಕ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಾಯ್ದೆ ತರಬೇಕಾಗಿ ಸರಕಾರಕ್ಕೆ ಮನವಿ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.
ನನ್ನ ಮನವಿಗೆ ಅನುಗುಣವಾಗಿ ಸರಕಾರವು 2021ರ ಆ.5ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದು ಕಾಯ್ದೆ ತಿದ್ದುಪಡಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅದೇ ವರ್ಷ ಅ.27ರಂದು ಲೋಕಾಯುಕ್ತದ ನಿಬಂಧಕರಿಗೆ ಪತ್ರ ಬರೆದು ನನ್ನ ಪತ್ರದ ಆಧಾರದ ಮೇಲೆ ಕಾಯ್ದೆ ತಿದ್ದುಪಡಿಗೆ ಅಭಿಪ್ರಾಯ ನೀಡುವಂತೆ ಕೇಳಿತ್ತು ಎಂದು ರಮೇಶ್ ಬಾಬು ಹೇಳಿದ್ದಾರೆ.
ಆದರೆ, ಲೋಕಾಯುಕ್ತ ನಿಬಂಧಕರಿಂದ ಆ ಪತ್ರಕ್ಕೆ ಉತ್ತರವಾಗಲಿ ಅಥವಾ ಮಾಹಿತಿಯಾಗಲಿ ನೀಡಿರುವ ಬಗ್ಗೆ ಇದುವರೆಗೆ ಯಾವುದೆ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿಲ್ಲ. ಲೋಕಾಯುಕ್ತ ಸಂಸ್ಥೆ ಪಾರದರ್ಶಕವಾಗಿ ನಡೆದುಕೊಳ್ಳಬೇಕಿದೆ. ಹೈಕೋರ್ಟ್ ನ್ಯಾಯಾಧೀಶರು ಸ್ವಯಂ ಪ್ರೇರಿತವಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಲೋಕಾಯುಕ್ತರು/ಉಪಲೋಕಾಯುಕ್ತರು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವಂತೆ ಕಾಯ್ದೆಗೆ ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಯು 2017-18ನೆ ಸಾಲಿನಿಂದ 2021-22ನೆ ಸಾಲಿನವರೆಗೆ ವಾರ್ಷಿಕ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಿಲ್ಲ. ವಿಧಾನಪರಿಷತ್ತಿನ 153ನೆ ಅಧಿವೇಶನದಲ್ಲಿ ಮಂಡಿಸಲಾದ ಇಲಾಖಾ ವಾರ್ಷಿಕ ವರದಿ ಲೆಕ್ಕ ಪತ್ರಗಳ ಪಟ್ಟಿಯಲ್ಲಿ, ಲೋಕಾಯುಕ್ತ ಸಂಸ್ಥೆಯ ತನ್ನ 4 ವರ್ಷದ ವಾರ್ಷಿಕ ವರದಿಗಳನ್ನು ಮಂಡಿಸಿಲ್ಲದೆ ಇರುವುದು ತಿಳಿದು ಬಂದಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯು ತನ್ನ ವಾರ್ಷಿಕ ವರದಿಯನ್ನು ಅನುಮೋದನೆಗಾಗಿ ನಿಯಮಾನುಸಾರ ವಿಧಾನ ಮಂಡಲದಲ್ಲಿ ಮಂಡಿಸಲು ಕ್ರಮ ಕೈಗೊಳ್ಳಬೇಕು. ಪಾರದರ್ಶಕ ಆಡಳಿತದ ಕಾರಣಕ್ಕಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳು ಮತ್ತು ಸರ್ಕಾರಿ ನೌಕರರು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವುದು ಒಂದು ಆರೋಗ್ಯಕರ ಮತ್ತು ಅವಶ್ಯಕವಾದ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬರುವ ಅಧಿವೇಶನದಲ್ಲಿ ರಾಜ್ಯ ಸರಕಾರವು ಲೋಕಾಯುಕ್ತ ಸಂಸ್ಥೆಯಲ್ಲಿ ಇರುವ ಲೋಕಾಯುಕ್ತರು, ಉಪಲೋಕಾಯುಕ್ತರು ಮತ್ತು ನೌಕರರು ಪ್ರತಿ ವರ್ಷ ತಮ್ಮ ಆಸ್ತಿಗಳನ್ನು ಬಹಿರಂಗಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಬೇಕೆಂದು ರಮೇಶ್ ಬಾಬು ವಿನಂತಿಸಿದ್ದಾರೆ.







