ಸಚಿವರ ಜೊತೆ ಪ್ರತ್ಯೇಕ ಸಭೆಗಳನ್ನು ಆರಂಭಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ

ಬೆಂಗಳೂರು : ರಾಜ್ಯ ಸರಕಾರಕ್ಕೆ ಎರಡು ವರ್ಷ ಪೂರೈಸಿರುವ ಬೆನ್ನಲ್ಲೆ ಶಾಸಕರಿಂದ ಅನುದಾನ ಹಂಚಿಕೆ, ಅಭಿವೃದ್ಧಿ ಕಾರ್ಯಗಳು, ಸಚಿವರ ಅಸಹಕಾರ ಸೇರಿದಂತೆ ವಿವಿಧ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಅವರ ಅಹವಾಲುಗಳನ್ನು ಆಲಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಚಿವರ ಜೊತೆ ಸಭೆಗಳನ್ನು ಆರಂಭಿಸಿದ್ದಾರೆ.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಚಿವರೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದ ಅವರು, ಶಾಸಕರಿಂದ ಬಂದಿರುವ ದೂರುಗಳು, ಸಲಹೆಗಳು ಹಾಗೂ ಬೇಡಿಕೆಗಳ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರು ಶಾಸಕರಿಂದ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣಗಳನ್ನು ನೀಡಿದ್ದಾರೆ.
ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ತೋಟಗಾರಿಕೆ ಹಾಗೂ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಸುರ್ಜೆವಾಲಾ ಪ್ರತ್ಯೇಕವಾಗಿ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಿಂದ ವ್ಯಕ್ತವಾಗಿದ್ದ ಅಸಮಾಧಾನ ಕುರಿತು ಸುರ್ಜೆವಾಲಾ, ಸಚಿವರ ಗಮನ ಸೆಳೆದರು. ಅಲ್ಲದೇ, ಅವರ ಇಲಾಖೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ಕೆಲಸಗಳು ಹಾಗೂ ಹಾಲಿ ನಡೆಯುತ್ತಿರುವ ಕೆಲಸ ಕಾರ್ಯಗಳ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು.
ಕೋಲಾರ ಜಿಲ್ಲಾ ಉಸ್ತುವಾರಿಯಾಗಿರುವ ಬಿ.ಎಸ್.ಸುರೇಶ್ ಕಾರ್ಯವೈಖರಿಗೆ ಜಿಲ್ಲೆಯ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಕೋಲಾರದವರನ್ನೆ ಉಸ್ತುವಾರಿಯನ್ನಾಗಿ ಮಾಡುವಂತೆಯೂ ಸುರ್ಜೆವಾಲಾ ಬಳಿ ಕೋರಿದ್ದರು ಎನ್ನಲಾಗಿದೆ.
ವಸತಿ ಇಲಾಖೆಯಲ್ಲಿ ಲಂಚ ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಹಿರಿಯ ಶಾಸಕ ಬಿ.ಆರ್.ಪಾಟೀಲ್ ಹಾಗೂ ವಸತಿ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆಯ ಆಡಿಯೋ ವೈರಲ್ ಆಗಿ, ಸರಕಾರಕ್ಕೆ ಮುಜುಗರ ಉಂಟಾಗಿತ್ತು.
ಈ ಬಗ್ಗೆ ಸುರ್ಜೆವಾಲಾ ಜೊತೆ ನಡೆದ ಸಭೆಯಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಎರಡು ವರ್ಷಗಳಿಂದ ಇಲಾಖೆಯಲ್ಲಿ ಮನೆಗಳ ಹಂಚಿಕೆ ಪ್ರಕ್ರಿಯೆ ಹೇಗೆ ನಡೆದಿದೆ. ಬಿ.ಆರ್.ಪಾಟೀಲ್ ಅವರ ಕ್ಷೇತ್ರಕ್ಕೆ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ ಎಂಬುದನ್ನು ದಾಖಲೆ ಸಮೇತ ಮಾಹಿತಿ ಒದಗಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲೆಯಲ್ಲಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಬಹಿರಂಗವಾಗಿ ಆರೋಪಿಸಿದ್ದರು. ಈ ಬಗ್ಗೆಯೂ ಸುರ್ಜೆವಾಲಾ, ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಎರಡು ದಿನಗಳ ಕಾಲ ಸುರ್ಜೆವಾಲಾ, ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
‘ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ನಮ್ಮ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಕೇಳಿದರು. ಅಲ್ಲದೇ, ಹೊಸ ಯೋಜನೆಗಳನ್ನು ಕೈಗೊಂಡಿರುವ ಬಗ್ಗೆಯೂ ಮಾಹಿತಿ ಕೇಳಿದರು. ಅವರು ಕೇಳಿದಂತಹ ಎಲ್ಲ ಪ್ರಶ್ನೆಗಳಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ. ನನ್ನ ಇಲಾಖೆಯಲ್ಲಿನ ಕಾರ್ಯವೈಖರಿಗೆ ಅವರು ಸಮಾಧಾನ ಹೊಂದಿದ್ದಾರೆ. ನನ್ನ ವಿರುದ್ಧ ಯಾವುದೇ ಶಾಸಕರು ದೂರು ನೀಡಿಲ್ಲ. ಈ ಬಗ್ಗೆ ಸಭೆಯಲ್ಲಿ ಚರ್ಚೆಯೂ ಆಗಿಲ್ಲ’
-ಬಿ.ಎಸ್.ಸುರೇಶ್, ನಗರಾಭಿವೃದ್ಧಿ ಸಚಿವ
‘ರಾಜ್ಯ ಸರಕಾರದ ಸಚಿವರಿಗೆ ಪ್ರಶಸ್ತಿ ಕೊಡುವುದಾದರೆ, ನನಗೆ ‘ನಂಬರ್ 1 ಮಂತ್ರಿ’ ಎಂದು ಪ್ರಶಸ್ತಿ ನೀಡಬಹುದು ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ. ಅವರು ನಮ್ಮ ಪಕ್ಷದ 130ಕ್ಕೂ ಹೆಚ್ಚು ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಶಾಸಕರು ಮನೆಗಳ ಹಂಚಿಕೆ ಹಾಗೂ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಕೋರಿ ಸುರ್ಜೆವಾಲಾ ಅವರ ಬಳಿ ಮನವಿ ಕೊಟ್ಟಿದ್ದರು. ಅದನ್ನು ಅವರು ನನಗೆ ಕೊಟ್ಟಿದ್ದಾರೆ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. 2013 ರಿಂದ 2018ರವರೆಗೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮನೆಗಳು ಹಂಚಿಕೆಯಾಗಿದ್ದು ಬಿಟ್ಟರೆ, ಆನಂತರ ಬಂದ ಸಮ್ಮಿಶ್ರ ಸರಕಾರ, ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಎರಡು ವರ್ಷಗಳಿಂದ ನಮ್ಮ ಸರಕಾರ ಹೊಸ ಮನೆಗಳನ್ನು ಮಂಜೂರು ಮಾಡದೇ, ಈ ಹಿಂದೆ ಆರಂಭಿಸಿರುವ ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಆದ್ಯತೆ ನೀಡುತ್ತಿದ್ದೇವೆ’
-ಝಮೀರ್ ಅಹ್ಮದ್ ಖಾನ್, ವಸತಿ ಸಚಿವ







