ತಲಾ ಆದಾಯದಲ್ಲಿ ಕರ್ನಾಟಕ ಮುಂಚೂಣಿ | ‘ಗ್ಯಾರಂಟಿ ಯೋಜನೆ’ಗಳ ಯಶಸ್ಸು: ರಣದೀಪ್ ಸಿಂಗ್ ಸುರ್ಜೇವಾಲಾ

ರಣದೀಪ್ ಸುರ್ಜೇವಾಲ (PTI)
ಬೆಂಗಳೂರು : ‘ರಾಷ್ಟ್ರೀಯ ಸರಾಸರಿ ತಲಾ ಆದಾಯ ಹೆಚ್ಚಳ(ಶೇ.57.6)ಕ್ಕಿಂತ ಕರ್ನಾಟಕ ರಾಜ್ಯದ ಸಾಧನೆ ಗಮನಾರ್ಹವಾಗಿದ್ದು, ಆ ಮೂಲಕ ಕರ್ನಾಟಕವು ದೇಶದ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಪುನರುಚ್ಚರಿಸಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳಿಗೆ ಇದು ಉತ್ತರವಾಗಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕರ್ನಾಟಕವು ಆರ್ಥಿಕ ಪ್ರಗತಿಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 10 ವರ್ಷಗಳಲ್ಲಿ ಕರ್ನಾಟಕದ ತಲಾದಾಯವು 1,05,697ರೂ.(2014-15ರಲ್ಲಿ)ರಿಂದ 2,04,605 ರೂ. (2024-25ರಲ್ಲಿ)ಗಳಿಗೆ ಏರಿಕೆ ಕಂಡಿದೆ. ಇದು ಶೇ.93.6ರಷ್ಟು ಹೆಚ್ಚಳವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ’ ಎಂದು ತಿಳಿಸಿದ್ದಾರೆ.
ತಲಾ ಆದಾಯ ಹೆಚ್ಚಳಕ್ಕೆ ರಾಜ್ಯದ ಸಮಗ್ರ ಅಭಿವೃದ್ಧಿ, ವಿಶೇಷವಾಗಿ 2023ರಲ್ಲಿ ನಮ್ಮ ಸರಕಾರ ಜಾರಿಗೆ ತಂದ ಜನಕಲ್ಯಾಣ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಪರಿಣಾಮವಾಗಿದೆ. ಜನಪ್ರಿಯ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಮತ್ತು ಜನರ ಜೀವನಮಟ್ಟ ಸುಧಾರಣೆಗೆ ಗಣನೀಯ ಕೊಡುಗೆ ನೀಡಿವೆ. ಈ ಯೋಜನೆಗಳ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಜನರ ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಕಾರಾತ್ಮಕ ಪರಿಣಾಮ: ಗ್ಯಾರಂಟಿ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಭಾಗದ ಜನರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿವೆ. ‘ಶಕ್ತಿ’ ಯೋಜನೆಯಿಂದಾಗಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ಇದರಿಂದ ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ಸೇವೆಗಳಿಗೆ ಸುಲಭವಾಗಿ ತಲುಪಲು ಸಾಧ್ಯವಾಗಿದೆ. ಇದು ಗ್ರಾಮೀಣ ಮಹಿಳೆಯರ ಆರ್ಥಿಕ ಹೊರೆ ಕಡಿಮೆ ಮಾಡುವುದಲ್ಲದೆ, ಅವರ ಸಾಮಾಜಿಕ ಚಲನಶೀಲತೆಯನ್ನು ಹೆಚ್ಚಿಸಿದೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ನೇರವಾಗಿ ಮಹಿಳೆಯರ ಕೈಗೆ ಹಣ ತಲುಪುತ್ತಿರುವುದು ಕೌಟುಂಬಿಕ ನಿರ್ಧಾರಗಳಲ್ಲಿ ಅವರ ಪಾತ್ರವನ್ನು ಬಲಪಡಿಸಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಣೆಯಿಂದ ಆಹಾರ ಭದ್ರತೆ ಖಚಿತವಾಗಿದ್ದು, ಇದು ಗ್ರಾಮೀಣ ಕುಟುಂಬಗಳ ದೈನಂದಿನ ಜೀವನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ತಿಂಗಳು ನಿಶ್ಚಿತ ಹಣ ಉಳಿತಾಯವಾಗುತ್ತದೆ. ಇದು ಉಳಿತಾಯಕ್ಕೆ ಬಳಕೆಯಾಗುತ್ತಿದೆ. ಈ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ, ಜನರ ಜೀವನಮಟ್ಟದಲ್ಲಿ ಸ್ಪಷ್ಟ ಮತ್ತು ಸಕಾರಾತ್ಮಕ ಬದಲಾವಣೆ ತಂದಿವೆ. ಅಲ್ಲದೆ, ಸ್ವ ಉದ್ಯೋಗಕ್ಕೆ ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಸರಕಾರದ ಸಮರ್ಥ ಆಡಳಿತದಿಂದ ನಾವೀನ್ಯತೆ, ಉದ್ಯಮಶೀಲತೆ, ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವು ರಾಜ್ಯದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದೆ. ಅಲ್ಲದೆ, ಉತ್ಪಾದನಾ ವಲಯ, ಕೃಷಿ, ಮತ್ತು ಸೇವಾ ವಲಯಗಳಲ್ಲಿನ ಸ್ಥಿರ ಬೆಳವಣಿಗೆಯು ರಾಜ್ಯದ ತಲಾ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ. ಸರಕಾರದ ದೂರದೃಷ್ಟಿಯ ನೀತಿಗಳು ಮತ್ತು ಸುಧಾರಣೆಗಳು ಹೂಡಿಕೆ ಸ್ನೇಹಿ ವಾತಾವರಣವನ್ನು ಸೃಷ್ಟಿಸಿದ್ದು, ಇದೂ ಆರ್ಥಿಕ ವಿಸ್ತರಣೆಗೆ ನೆರವಾಗಿದೆ’
-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಉಸ್ತುವಾರಿ







