ʼಪೆಟ್ರೋಲ್, ಡೀಸೆಲ್ ಬೆಲೆ ಏರಿಕೆʼ ಬಿಜೆಪಿಯ ಲೂಟಿ : ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ

ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)
ಬೆಂಗಳೂರು : ‘ಹನ್ನೊಂದು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ 43 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದು 2014ರಿಂದ ಪ್ರತಿ ದಿನಕ್ಕೆ 1 ಸಾವಿರ ಕೋಟಿ ರೂ.ಗಳು ಆಗುತ್ತದೆ’ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, 2014ರ ಮೇ 26ರಂದು (ಯುಪಿಎ ಅವಧಿಯಲ್ಲಿ) ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 71.41 ರೂ.ಮತ್ತು ಡೀಸೆಲ್ ಬೆಲೆ ಪ್ರತಿ ಲೀ.ಗೆ 56.71 ರೂ.ಗಳಿತ್ತು. ಇಂದು, ಪೆಟ್ರೋಲ್ ಪ್ರತಿ ಲೀ.ಗೆ 102.92 ರೂ.ಮತ್ತು ಡೀಸೆಲ್ ಪ್ರತಿ ಲೀ.ಗೆ 90.99 ರೂ.ಗಳಿಗೆ ಮಾರಾಟವಾಗುತ್ತಿದೆ (ದಿಲ್ಲಿಯಲ್ಲಿ). 2014ರ ಕಚ್ಚಾತೈಲ ಬೆಲೆಗಳಿಗೆ (ಬ್ಯಾರೆಲ್ಗೆ 108 USD) ಹೋಲಿಸಿದರೆ, ಪಶ್ಚಿಮ ಏಷ್ಯಾ ದ ಯುದ್ಧದ ಮೊದಲಿನ ಬೆಲೆಗಳ ಪ್ರಕಾರ (ಬ್ಯಾರೆಲ್ಗೆ 70 USD), ಪೆಟ್ರೋಲ್ ಬೆಲೆ 61.60 ರೂ. ಮತ್ತು ಡೀಸೆಲ್ ಬೆಲೆ 56.99 ರೂ.ಗೆ ಇರಬೇಕಿತ್ತು. ಉಳಿದದ್ದೆಲ್ಲವೂ ಬಿಜೆಪಿಯ ಲೂಟಿ. ಇಂದು ಸಿಎನ್ಜಿ ಬೆಲೆಯನ್ನು ಕೆಜಿಗೆ 2 ರೂ.ಹೆಚ್ಚಿಸಲಾಗಿದ್ದು, ಅದು 90 ರೂ.ಗಳಿಗೆ ತಲುಪಿದೆ ಎಂದು ವಿವರ ನೀಡಿದ್ದಾರೆ.
‘2014ರಿಂದ 2025ರ ವರೆಗೆ, ಮೋದಿ ಸರಕಾರವು ಪೆಟ್ರೋಲ್ ಮೇಲೆ ಸರಾಸರಿ 21.60 ರೂ. ಮತ್ತು ಡೀಸೆಲ್ ಮೇಲೆ 12.80 ರೂ.ಅಬಕಾರಿ ಸುಂಕವನ್ನು ವಿಧಿಸಿದೆ. ಇದು ಸಾಮಾನ್ಯ ಭಾರತೀಯರು ಪೆಟ್ರೋಲ್ ಬೆಲೆಯ ಶೇ.23.3ರಷ್ಟು ಮತ್ತು ಡೀಸೆಲ್ ಬೆಲೆಯ ಶೇ.21.4ರಷ್ಟನ್ನು ಮೋದಿ ಸರಕಾರದ ಬೊಕ್ಕಸಕ್ಕೆ ನೀಡುವಂತೆ ಮಾಡಿದೆ, ಅಂದರೆ ಅಗತ್ಯ ಇಂಧನವನ್ನು ಲಾಭ ಗಳಿಸುವ ಸಾಧನವಾಗಿ ಪರಿವರ್ತಿಸಲಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ದೂರಿದ್ದಾರೆ.
ಮೋದಿ ಸರಕಾರವು ಅಬಕಾರಿ ಸುಂಕವನ್ನು 21 ಬಾರಿ ಪರಿಷ್ಕರಿಸಿದ್ದು, ಅದರಲ್ಲಿ 12 ಬಾರಿ ಹೆಚ್ಚಳ ಮಾಡಲಾಗಿದೆ. ಇದು ‘ಬೆಲೆ ಇಳಿಕೆ’ ನೆಪದಲ್ಲಿ ಸಾಮಾನ್ಯ ಜನರಿಂದ ಹಣ ಕಬಳಿಸುವ ಮಾದರಿಯನ್ನು ಪ್ರತಿಬಿಂಬಿಸುತ್ತದೆ. 2026ರ ಮಾರ್ಚ್ 27ರಂದು, ಮೋದಿ ಸರಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13 ರೂ.ಗಳಿಂದ 10 ರೂ.ಗೆ ಮತ್ತು ಡೀಸೆಲ್ ಮೇಲಿನ ಸುಂಕವನ್ನು 10 ರೂ.ಗಳಿಂದ ಶೂನ್ಯಕ್ಕೆ ಇಳಿಸುವುದಾಗಿ ಘೋಷಿಸಿತು. ಇದು ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೈಚಳಕವೇ ಹೊರತು ಬೇರೇನಲ್ಲ. ಸಾಮಾನ್ಯ ಮನುಷ್ಯನಿಗೆ 1 ರೂ.ಲಾಭವೂ ಸಿಗದಿದ್ದರೂ, ಈ ಪ್ರಯೋಜನದ ಸುಮಾರು ಶೇ.20ರಷ್ಟು ಎರಡು ಖಾಸಗಿ ತೈಲ ಕಂಪೆನಿಗಳಾದ ನಯಾರಾ ಎನರ್ಜಿ ಮತ್ತು ರಿಲಯನ್ಸ್ ಗೆ ವರ್ಗಾಯಿಸಲ್ಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿ ಬಾರಿ ಚುನಾವಣೆಗಳು ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್-ಗ್ಯಾಸ್ ಬೆಲೆಗಳನ್ನು ಏರಿಸುವುದು ಬಿಜೆಪಿ ಸರಕಾರದ ಕುತಂತ್ರದ ಯೋಜನೆಯಾಗಿದೆ. 2014ರ ಸಾರ್ವತ್ರಿಕ ಚುನಾವಣೆ ಮತ್ತು 2015ರ ಫೆಬ್ರವರಿ 7ರ ದಿಲ್ಲಿ ವಿಧಾನಸಭಾ ಚುನಾವಣೆ ಮುಗಿದ ನಂತರ, ಮೋದಿ ಸರಕಾರವು ಫೆಬ್ರವರಿ 15/16ರಂದು ಬೆಲೆ ಏರಿಸಿತು. 2019ರ ಸಾರ್ವತ್ರಿಕ ಚುನಾವಣೆ ಮುಗಿದ ಮರುದಿನವೇ (ಮೇ 20) ಬೆಲೆ ಏರಿಕೆ ಮಾಡಲಾಯಿತು. 2022ರ ಮಾರ್ಚ್ 10ರಂದು ಉತ್ತರ ಪ್ರದೇಶದ ಚುನಾವಣೆ ಮುಗಿದ ನಂತರ, ಮಾರ್ಚ್ 22ರಿಂದ ಕೇವಲ 16 ದಿನಗಳಲ್ಲಿ 14 ಬಾರಿ ಬೆಲೆ ಏರಿಸಲಾಯಿತು. ಇದೀಗ ಮತ್ತೆ ಚುನಾವಣೆಗಳು ಮುಗಿದ ಬೆನ್ನಲ್ಲೇ, ಮೇ 15ರಂದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ವಾಗ್ದಾಳಿ ನನಡೆಸಿದ್ದಾರೆ.
ಎಲ್ಪಿಜಿ ಸಿಲಿಂಡರ್ ಬೆಲೆ 2014ರ ಮೇ ತಿಂಗಳಿನಲ್ಲಿ (ಯುಪಿಎ ಸರಕಾರ) 414 ರೂ.ಇದ್ದದ್ದು, 2026ರ ಮಾರ್ಚ್ಗೆ (ಎನ್ಡಿಎ ಸರಕಾರ) 915.5 ರೂ.ಗಳಿಗೆ ಏರಿದೆ. ಅಂದರೆ 12 ವರ್ಷಗಳಲ್ಲಿ 501.5 ರೂ. (ಶೇ.121.6ರಷ್ಟು) ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಎಲ್ಪಿಜಿ ಬೆಲೆ 2013-14ರಲ್ಲಿ ಸುಮಾರು 880.5 USD ಇದ್ದರೆ, ಮಾರ್ಚ್ 2026ರಲ್ಲಿ ಅದು 542.5 USZDಗೆ ಕುಸಿದಿದೆ. ಅಂದರೆ ಬೆಲೆ ಶೇ.38.5ರಷ್ಟು ಕಡಿಮೆಯಾಗಿದ್ದರೂ ಭಾರತದಲ್ಲಿ ಮಾತ್ರ ಬೆಲೆ ಗಗನಕ್ಕೇರಿದೆ ಎಂದು ಸುರ್ಜೇವಾಲ ಟೀಕಿಸಿದ್ದಾರೆ.
2014ರಲ್ಲಿ 1,241 ರೂ.ಇದ್ದ ವಾಣಿಜ್ಯ ಎಲ್ಪಿಜಿ (19 ಕೆಜಿ) ಬೆಲೆ ಇದೀಗ 2026ರಲ್ಲಿ 3,152 ರೂ.ಗಳಿಗೆ ಆಗಿದೆ. ಅಂದರೆ 1,911 ರೂ.ಗಳಷ್ಟು ಭಾರಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 5 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 2026ರ ಮೇ 1ರಿಂದ ಜಾರಿಗೆ ಬರುವಂತೆ 21.50 ರೂ.ಹೆಚ್ಚಿಸಲಾಗಿದ್ದು, ಅದು 318.50 ರೂ.ನಿಂದ 340 ರೂ.ಗಳಿಗೆ ಏರಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.






