ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣ : ವಿಧಾನಸಭೆಯಲ್ಲಿ ಪ್ರತಿಧ್ವನಿ
ನಟಿಗೆ 15 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಚಿನ್ನ ಕಳ್ಳಸಾಗಣೆ ಆರೋಪದಡಿ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಯ ಪುತ್ರಿ, ನಟಿ ರನ್ಯಾ ರಾವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸೋಮವಾರ ಉದ್ಯಮಿಯೊರ್ವನ ಪುತ್ರನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಬಂಧಿಸಿದೆ.
ಮತ್ತೊಂದೆಡೆ ಆರೋಪಿ ನಟಿ ರನ್ಯಾ ರಾವ್‍ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆಕೆಗೆ ಅನೇಕ ರಾಜಕಾರಣಿಗಳ ನಂಟಿದೆ ಎನ್ನುವ ಮಾತುಗಳ ನಡುವೆ ವಿಧಾನಸಭೆಯಲ್ಲಿಯೂ ಈ ಪ್ರಕರಣ ಪ್ರತಿಧ್ವನಿಸಿತು.
ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಹೆಚ್ಚಿನ ವಿಚಾರಣೆಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಅನ್ವಯ ಮೂರು ದಿನಗಳ ಕಾಲ ರನ್ಯಾ ರಾವ್ ಅವರನ್ನು ಕಸ್ಟಡಿಗೆ ನೀಡಿ ಮಾ.7ರಂದು ನ್ಯಾಯಾಲಯ ಆದೇಶಿಸಿತ್ತು.
ಇದೀಗ, ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ರನ್ಯಾ ರಾವ್ ಅನ್ನು ಸೋಮವಾರ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.ಈ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿತು.
ಮತ್ತೋರ್ವ ಬಂಧನ: ಆರೋಪಿ ನಟಿವೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕುರಿತು ಮೇಲ್ನೋಟಕ್ಕೆ ಮಾಹಿತಿ ಗೊತ್ತಾಗಿರುವ ಹಿನ್ನೆಲೆ ಹೋಟೆಲ್ ಮಾಲಕನೋರ್ವನ ಪುತ್ರ ತರುಣ್ ರಾಜು ಎಂಬುವವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರೊಂದಿಗೆ ತರುಣ್ ಹೆಸರು ಕೇಳಿಬಂದಿತ್ತು. ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ನಂತರ ಬಂಧಿಸಿದ್ದಾರೆ. ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್‍ರಿಂದ ತರುಣ್ ರಾಜು ಚಿನ್ನ ತರಿಸಿಕೊಳ್ಳುತ್ತಿದ್ದ ಎಂದೂ ಹೇಳಲಾಗುತ್ತಿದೆ.
ರಾಜಕಾರಣಿಗಳ ನಂಟು: ಬಂಧಿತ ಆರೋಪಿ ರನ್ಯಾ ರಾವ್‍ಗೆ ಪ್ರಭಾವಿ ರಾಜಕಾರಣಿಗಳ ನಂಟಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಈಕೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ಬಚಾವ್ ಆಗಲೂ ರಾಜಕಾರಣಿಗಳ, ಕೆಲ ಸಚಿವರ ಪ್ರಭಾವವೂ ಬಳಕೆ ಮಾಡಿಕೊಳ್ಳುತ್ತಿದ್ದಳು ಎನ್ನುವ ಮಾಹಿತಿ ಗೊತ್ತಾಗಿದೆ.
ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ರನ್ಯಾರಾವ್ ಚಿನ್ನ ಸಾಗಾಣಿಕೆ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಬಂಧಿತರಾದ ರನ್ಯಾರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ರನ್ಯಾರಾವ್ ಕಳೆದ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ವಿದೇಶಕ್ಕೆ ದುಬೈಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಸಂಪೂರ್ಣವಾದ ಪ್ರೊಟೊಕಾಲ್ ವ್ಯವಸ್ಥೆ ನೀಡುತ್ತಿದ್ದರು ಎಂದು ಆರೋಪಿಸಿದರು.
ಸರಕಾರಕ್ಕೆ ಮಾಹಿತಿವಿಲ್ಲ: ಡಾ.ಪರಮೇಶ್ವರ್
ಚಿನ್ನ ಕಳ್ಳಸಾಗಣೆ ಆರೋಪದಡಿ ಬಂಧನಕ್ಕೊಳಗಾಗಿರುವ ರನ್ಯಾರಾವ್ ಪ್ರಕರಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸದನಕ್ಕೆ ತಿಳಿಸಿದರು.
ಸೋಮವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ವಿ.ಸುನಿಲ್ ಕುಮಾರ್ ಪ್ರಸ್ತಾಪಿಸಿ, ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಬಂಧಿತರಾಗಿರುವುದು ಎಲ್ಲರಿಗೂ ಗೊತ್ತಿದೆ. ಇದೊಂದು ಗಂಭೀರ ಪ್ರಕರಣ, ನಮ್ಮ ದೇಶದ ಬೇರೆ ರಾಜ್ಯಗಳಿಗೆ ಕಳ್ಳಸಾಗಾಣಿಕೆ ಬೆಂಗಳೂರು ಕೇಂದ್ರ ಸ್ಥಾನವಾಗಿದೆಯೇ ಎಂಬ ಅನುಮಾನ ಬರುತ್ತಿದೆ. ಇಬ್ಬರು ಸಚಿವರ ಕೈವಾಡ ಇರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಚಿನ್ನ ಕಳ್ಳ ಸಾಗಾಣಿಕೆ ವರದಿಯಾಗಿರುವುದು ವಿಮಾನ ನಿಲ್ದಾಣದಲ್ಲಿ, ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅವರು ಸಂಪೂರ್ಣ ಕೇಂದ್ರ ಸರಕಾರಕ್ಕೆ ವರದಿ ಮಾಡಿಕೊಳ್ಳುತ್ತಾರೆ. ವಿಮಾನ ನಿಲ್ದಾಣ ಕೂಡ ಕೇಂದ್ರ ಸರಕಾರ ವ್ಯಾಪ್ತಿಯಲ್ಲಿದೆ. ಈ ಪ್ರಕರಣದಲ್ಲಿ ರಾಜ್ಯದ ಪೊಲೀಸರಿಗಾಗಲಿ, ಸರಕಾರಕ್ಕಾಗಲಿ ಯಾವುದೇ ಮಾಹಿತಿ ಇಲ್ಲ ಎಂದರು.
ಆಗ ಸುನೀಲ್ ಕುಮಾರ್, ಗೃಹ ಸಚಿವರು ಮಾಹಿತಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುವುದು ಸರಿಯಲ್ಲ, ಅಷ್ಟು ದೊಡ್ಡ ಪ್ರಮಾಣದ ಅಪರಾಧದ ಬಗ್ಗೆ ವಿಷಯವೇ ಗೊತ್ತಿಲ್ಲ ಎಂದರೆ ಇದನ್ನು ಒಪ್ಪಲು ಸಾಧ್ಯವಿಲ್ಲ.ಈ ಕುರಿತು ತನಿಖೆಯನ್ನು ಸಿಬಿಐಗೆ ರಾಜ್ಯ ಸರಕಾರ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಮೊದಲು ಸಿಬಿಐ ತನಿಖೆ ನಡೆಸುವುದಾದರೇ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲಾಗುತ್ತಿತ್ತು. ರನ್ಯಾ ಪ್ರಕರಣದಲ್ಲಿ ನಮ್ಮ ಅನುಮತಿಯನ್ನು ಕೇಳಿಲ್ಲ, ನಾವು ಕೂಡ ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರಕಾರದಲ್ಲಿ ರನ್ಯಾ ಯೋಜನೆಗೆ ಅನುಮೋದನೆ: ಎಂ.ಬಿ. ಪಾಟೀಲ್
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಅವರ ಟಿಎಂಟಿ ಸರಳು ತಯಾರಿಸುವ ಯೋಜನೆಗೆ ಹಿಂದಿನ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಜಮೀನು ಮಂಜೂರು ಮಾಡಲು 2023ರ ಜನವರಿ 2ರಂದು ನಡೆದಿದ್ದ ಉನ್ನತ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ತೀರ್ಮಾನಿಸಿತ್ತು. ಆದರೆ ರನ್ಯಾ ಅವರು ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಕಾರಣ ಅವರಿಗೆ ಜಮೀನಿನ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







