ರನ್ಯಾರಾವ್ ಪ್ರಕರಣ | ಒಂದು ವರ್ಷದಲ್ಲಿ 127 ಕೆ.ಜಿ. ಚಿನ್ನ ಕಳ್ಳಸಾಗಣೆ : ಈ.ಡಿ. ಮಾಹಿತಿ

ರನ್ಯಾರಾವ್\ಸಾಂದರ್ಭಿಕ ಚಿತ್ರ(PC : freepik)
ಬೆಂಗಳೂರು, ಫೆ.26 : ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟಿ ರನ್ಯಾರಾವ್ ಹಾಗೂ ಸಹಚರರು ಒಂದು ವರ್ಷದಲ್ಲಿ 102.55 ಕೋಟಿ ಮೌಲ್ಯದ 127 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯವು(ಈ.ಡಿ.) ತಿಳಿಸಿದೆ.
ಫೆ.25ರ ಬುಧವಾರ ನಟಿ ರನ್ಯಾರಾವ್ ಸೇರಿದಂತೆ ಮೂವರ ವಿರುದ್ಧ ಜಾರಿ ನಿರ್ದೇಶನಾಲಯವು(ಈ.ಡಿ.) ಬೆಂಗಳೂರಿನ ಪಿಎಂಎಲ್ಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ. ಹರ್ಷವರ್ದಿನಿ ರನ್ಯಾ ಯಾನೆ ರನ್ಯಾರಾವ್, ತರುಣ್ ಕೊಂಡೂರು ಮತ್ತು ಸಾಹಿಲ್ ಸಕರಿಯಾ ಜೈನ್ ಎಂಬುವರ ವಿರುದ್ಧ ದೊಡ್ಡ ಪ್ರಮಾಣದ ಚಿನ್ನದ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪದಡಿ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ ಎಂದು ಈ.ಡಿ. ತನ್ನ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.
2024ರ ಮಾರ್ಚ್ 4ರಂದು ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್ಲೈನ್ಸ್ ವಿಮಾನದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ ರನ್ಯಾ ರಾವ್ನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ 14.80 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ಕೂಡಲೇ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು.
ಬಳಿಕ ವಿಚಾರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ರನ್ಯಾರಾವ್ ಸಹಚರರಾದ ತರುಣ್ ಕೊಂಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಬಂಧಿಸಿದ್ದರು. ನಂತರದ ಪರಿಶೀಲನೆಗಳಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಕಂದಾಯ ಗುಪ್ತಚರ ನಿರ್ದೇಶನಾಲಯದ ದೂರಿನ ಮೇರೆಗೆ ಈ.ಡಿ. ತನಿಖೆ ಪ್ರಾರಂಭಿಸಿತ್ತು. ಮಾರ್ಚ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಸುಮಾರು 102.55 ಕೋಟಿ ರೂ. ಮೌಲ್ಯದ ಒಟ್ಟು 127.287 ಕೆ.ಜಿ. ಚಿನ್ನವನ್ನು ಆರೋಪಿಗಳು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದರು. ಹೀಗೆ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹ್ಯಾಂಡ್ಲರ್ಗಳು ಮತ್ತು ಆಭರಣ ವ್ಯಾಪಾರಿಗಳ ಜಾಲದ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡಿದ್ದರು. ಮಾರಾಟದಿಂದ ಬಂದ ನಗದು ಹಣವನ್ನು ಭಾರತ ಮತ್ತು ವಿದೇಶಗಳಲ್ಲಿ ಹವಾಲಾ ಮಾರ್ಗಗಳ ಮೂಲಕ ಪಡೆದುಕೊಳ್ಳಲಾಗಿದೆ. ಆ ಹಣವನ್ನು ಮತ್ತಷ್ಟು ಹಂತಹಂತವಾಗಿ ಮತ್ತು ಕಾನೂನುಬದ್ಧ ವ್ಯವಹಾರ ವಹಿವಾಟುಗಳಾಗಿ ಬಿಂಬಿಸಲು ಬಹು ಬ್ಯಾಂಕ್ ಖಾತೆಗಳು ಮತ್ತು ಸಂಸ್ಥೆಗಳ ಮೂಲಕ ರವಾನಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಈ.ಡಿ. ಮಾಹಿತಿ ನೀಡಿದೆ.






