‘ಕಾಲ್ತುಳಿತ ಪ್ರಕರಣ’ ವಿಶೇಷ ಅಧಿವೇಶನ ಕರೆಯಿರಿ : ಆರ್.ಅಶೋಕ್

ಬೆಂಗಳೂರು : ‘ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಚರ್ಚೆಗೆ ರಾಜ್ಯ ಸರಕಾರ ಈ ಕೂಡಲೆ ವಿಧಾನ ಮಂಡಲ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಇಂದಿಲ್ಲಿ ಆಗ್ರಹಿಸಿದ್ದಾರೆ.
ರವಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮಾಡಿದ ತಪ್ಪುಗಳ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು. ಮೂರು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾವ ತನಿಖೆ ನಿಜ ಎಂದು ಗೊತ್ತಾಗುತ್ತಿಲ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರ ಪಾಪರ್ ಆಗಿಲ್ಲ ಎಂದಾದರೆ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಿ. ನಾವೆಲ್ಲರೂ ಒಂದು ತಿಂಗಳ ಸಂಬಳವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಿದ್ದೇವೆ ಎಂದ ಅವರು, ಕಪ್ ಗೆಲ್ಲುವುದು ಹೊಸ ಸಂಗತಿಯಲ್ಲ. ಪ್ರತಿ ರಾಜ್ಯಗಳ ತಂಡ ಕಪ್ ಗೆದ್ದಾಗಲೂ ಈ ರೀತಿಯ ಘಟನೆ ನಡೆದಿಲ್ಲ. ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹೋಗಿ ಪ್ರಚಾರ ಪಡೆದಿಲ್ಲ ಎಂದು ಟೀಕಿಸಿದರು.
ಕಾಲ್ತುಳಿತದ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ಸರಕಾರ ಉಲ್ಲಂಘಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಕ್ಕಾಟ ಇಲ್ಲದಿದ್ದರೆ ವಿದ್ಯಾರ್ಥಿಗಳು ಸಾಯುತ್ತಿರಲಿಲ್ಲ. ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕಿದ್ದವರು ಕಪ್‍ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ 8 ಮಕ್ಕಳು ಸತ್ತಿದ್ದರು. ಅನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕರು ಎಂದು ದೂರಿದರು.
ಕಾನೂನನ್ನು ಪೊಲೀಸ್ ಅಧಿಕಾರಿಗಳು ಜಾರಿ ಮಾಡುತ್ತಾರೆ. ಜೂ.4ರಂದು ವಿಧಾನಸೌಧದ ಪೊಲೀಸರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನು ನಿಷೇಧಿಸಬೇಕು ಎಂದೂ ಹೇಳಲಾಗಿದೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರಕಾರವೇ ಕಾನೂನು ಉಲ್ಲಂಘಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬದವರು ಬರಬಾರದು ಎಂದು ಪೊಲೀಸರು ಸೂಚಿಸಿದ್ದರು. ಆದರೆ ಅಲ್ಲಿ ಎಲ್ಲರ ಕುಟುಂಬದವರು ಇದ್ದರು. ಸಿಸಿಟಿವಿ ಕ್ಯಾಮರಾ ಬೇಕೆಂದು ಹೇಳಿದ್ದರೂ ಅದನ್ನು ಪಾಲಿಸಿಲ್ಲ. ಡ್ರೋನ್‍ಗೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಈ ಎಲ್ಲ ಸೂಚನೆಗಳನ್ನು ಸರಕಾರ ಹರಿದು ಬಿಸಾಡಿದೆ ಎಂದು ಟೀಕಿಸಿದರು.
ಸರಕಾರವೇ ಇಷ್ಟೆಲ್ಲ ಕಾನೂನು ಉಲ್ಲಂಘನೆ ಮಾಡಿದ್ದರೂ, ಕೊನೆಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ಕ್ರಮ ವಹಿಸಲಾಗಿದೆ. ಠಾಣೆ ಪೊಲೀಸರನ್ನು ಅಮಾನತು ಮಾಡಿದ್ದಾರೆ ಎಂದು ಅವರು ದೂರಿದರು.







