ಕಾಂಗ್ರೆಸ್ ಸರಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ವಿಧಾನಸಭಾ ಕ್ಷೇತ್ರ, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ : ಆರ್.ಅಶೋಕ್

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ವಿಧಾನಸಭಾ ಕ್ಷೇತ್ರಗಳಲ್ಲಿ ನ.27, 28ರಂದು ಹೋರಾಟ ನಡೆಸಲಾಗುವುದು. ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ಅವರು ‘ಅನ್ನದಾತರಿಗೆ ಕೈಕೊಟ್ಟ ಕಾಂಗ್ರೆಸ್ ಸರಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿದರು. ಕಾಂಗ್ರೆಸ್ಸಿನ ರೈತ ವಿರೋಧಿ ನಡೆ ಎಂಬ ಕಿರುಚಿತ್ರವನ್ನೂ ಪ್ರದರ್ಶಿಸಲಾಯಿತು. ನಾನು 25ರಂದು ಕಲಬುರಗಿ ಮತ್ತು 26ರಂದು ಹೊಸಪೇಟೆಯಲ್ಲಿ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಬೆಳೆಹಾನಿಯಿಂದ, ಬೆಂಬಲ ಬೆಲೆ ಸಿಗದೇ ಇರುವುದರಿಂದ, ರೈತರಿಗೆ ಸಂಕಷ್ಟ ಉಂಟಾಗಿದೆ. ಆಲಮಟ್ಟಿ ನೀರನ್ನು ಸರಿಯಾಗಿ ಶೇಖರಿಸದೇ ಇರುವುದರಿಂದ ಆ ಭಾಗದ ರೈತರಿಗೆ ಎರಡನೇ ಬೆಳೆ ಪಡೆಯುವ ಯೋಗವನ್ನು ಕಸಿದಿದ್ದಾರೆ. ತುಂಗಭದ್ರಾ ಗೇಟ್ ದುರಸ್ತಿ ಕಾರ್ಯ ಆಮೆಗತಿಯಲ್ಲಿ ನಡೆದಿದೆ ಎಂದು ಆಕ್ಷೇಪಿಸಿದರು. ಕರ್ನಾಟಕದ ನೀರು ಆಂಧ್ರದ ಪಾಲಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಕಾರಣ ಎಂದು ಟೀಕಿಸಿದರು.
ಅತಿವೃಷ್ಟಿ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಘೋಷಿಸಿಲ್ಲ. ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಮೀನಾಮೇಷ, ಎರಡನೇ ಬೆಳೆಗೆ ನೀರು ಕೊಡದೇ ಅನ್ಯಾಯ, ಹಾಲಿನ ಪ್ರೋತ್ಸಾಹಧನ ರೈತರ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ರಾಜ್ಯ ಬಿಜೆಪಿ ರೈತ ಮೋರ್ಚಾದ ವತಿಯಿಂದ ಇಡೀ ರಾಜ್ಯದ ಎಲ್ಲ ಜಿಲ್ಲಾ- ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ, ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು.
ಕರ್ನಾಟಕದಲ್ಲಿ ಸಿಎಂ ಕುರ್ಚಿಯೇ ಇಲ್ಲ :
ರಾಜ್ಯ ಸರಕಾರವು ಕಳೆದ 6 ತಿಂಗಳಿನಿಂದ ಕುರ್ಚಿ ಕಿತ್ತಾಟ ಮುಂದುವರೆಸಿದೆ. ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕೆಂದು ಹೊಡೆದಾಟ, ಬಡಿದಾಟ ನಡೆಯುತ್ತಿದೆ. ಸಿಎಂ ಕುರ್ಚಿಯ 4 ಕಾಲುಗಳನ್ನು ಒಬ್ಬೊಬ್ಬರು ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್, ಜಾರಕಿಹೊಳಿ ಈ ಕುರ್ಚಿ ಕಾಲುಗಳನ್ನು ಕಿತ್ತುಕೊಂಡಿದ್ದಾರೆ. ಕರ್ನಾಟಕದಲ್ಲಿ ಇವತ್ತು ಮುಖ್ಯಮಂತ್ರಿ ಕುರ್ಚಿಯೇ ಇಲ್ಲ ಎಂದು ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.
ಹೆಸರಿಗಷ್ಟೇ ಅಧ್ಯಕ್ಷರು :
ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷಕ್ಕೆ ಹೆಸರಿಗಷ್ಟೇ ಅಧ್ಯಕ್ಷರು. ಖರ್ಗೆಯವರ ಕುರ್ಚಿಗೆ ಏನೂ ಶಕ್ತಿ ಇಲ್ಲ. ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಆಗಿರಬೇಕಿತ್ತು. ಆದರೆ, ಅವರು ಪರಾವಲಂಬಿ ಎಂದು ತಿಳಿಸಿದರು.
ವಿಶೇಷ ಅನುದಾನ ನೀಡಿದ್ದ ಬಿಜೆಪಿ ರಾಜ್ಯ ಸರಕಾರ :
ಹಿಂದೆ ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ, ನೆರೆ ಬಂದಾಗ ರೈತರಿಗೆ ವಿಶೇಷ ಅನುದಾನವನ್ನು ಕೊಟ್ಟಿತ್ತು. ನೆರೆ ಆಗಿ 6 ತಿಂಗಳಾದರೂ ಈ ಸರಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರೈತ ಮೋರ್ಚಾ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ್, ರಾಜ್ಯ ವಕ್ತಾರ ಮೋಹನ್ ವಿಶ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.







