20 ದಿನ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ : ಆರ್.ಅಶೋಕ್ ಆಗ್ರಹ

ಬೆಂಗಳೂರು : ರಾಜ್ಯ ಸರಕಾರ ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸುತ್ತಿದೆ. ಅದು 8 ದಿನಕ್ಕಿಂತ ಹೆಚ್ಚು ಕಾಲ ನಡೆಯಲಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯು ಖಾಸಗಿ ಹೋಟೆಲ್ ನಲ್ಲಿ ಇಂದು ನಡೆಯಿತು. ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮರ್ಜಿಗೋಸ್ಕರ, ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ. ಬೆಂಗಳೂರಿನ ವಿಚಾರಗಳನ್ನೇ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರಿದ್ದಾಗ ಅಲ್ಲೊಂದು ಭವನ ಆಗಬೇಕು. ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ; ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ಅವರು ಆಗ್ರಹಿಸಿದರು.
ಎನ್‍ಡಿಎ ಅಂಗ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಹಿಂದಿನ ಅಧಿವೇಶನಗಳಲ್ಲೂ ಜೊತೆಯಾಗಿ ಕೆಲಸ ಮಾಡಿವೆ. ಮುಡಾ ಹಗರಣ, ನಿವೇಶನ ವಾಪಸಾತಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಂತ್ರಿ ರಾಜೀನಾಮೆ ವಿಚಾರ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮಾಯಕರ ದುರ್ಮರಣ ಇವೆಲ್ಲ ವಿಚಾರಗಳಲ್ಲಿ ನಮ್ಮೆಲ್ಲ ಶಾಸಕರು, ಮೇಲ್ಮನೆ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ಸರಕಾರ ತಪ್ಪು ಹಾದಿಯಲ್ಲಿದೆ. ಜನರಿಗೆ ನೀಡಿದ ಭರವಸೆಗೆ ವಿರುದ್ಧವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಶೇ.60 ಕಮಿಷನ್ ಸರಕಾರವಾಗಿ ಮಾರ್ಪಟ್ಟಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕಾಂಗ್ರೆಸ್ಸಿನ ಕೇಂದ್ರ ಹೈಕಮಾಂಡಿಗೆ ಹಣ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಧಾನಸಭೆಗೆ ಸಂಬಂಧಿಸಿದ 10-12 ವಿಚಾರಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಸಭೆಗೆ ಬಂದು ಮಾರ್ಗದರ್ಶನ ಮಾಡಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಫೋನ್ ಕರೆ ಮಾಡಿ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರಿಗಣಿಸಲಿದ್ದೇವೆ ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆ ತೆಗೆದುಕೊಳ್ಳಿ : ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಕಾಟಾಚಾರದ ಅಧಿವೇಶನ ಎಂಬ ಭಾವನೆ ದೂರ ಮಾಡುವ ದೃಷ್ಟಿಯಿಂದ ಮೊದಲ ದಿನದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನೇ ಪ್ರಮುಖವಾಗಿ ತೆಗೆದುಕೊಳ್ಳಬೇಕೆಂದು ಇವತ್ತಿನ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು.
ಯಾದಗಿರಿ, ಕಲ್ಬುರ್ಗಿ, ಬೀದರ್, ಬಾಗಲಕೋಟೆ, ಬಿಜಾಪುರ, ಬೆಳಗಾವಿ ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಸರಕಾರ ಈ ವಿಷಯದಲ್ಲಿ ಮೂರ್ನಾಲ್ಕು ತಿಂಗಳಾದ ಬಳಿಕ ನಿದ್ದೆಯಿಂದ ಎದ್ದೇಳುತ್ತಿದೆ ಎಂದು ದೂರಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.







