ಸಿಎಂ-ಡಿಸಿಎಂ ʼಬ್ರೇಕ್‌ಫಾಸ್ಟ್ ಮೀಟಿಂಗ್ʼ | ಎರಡು ಬಣಗಳ ‘ಕದನ ವಿರಾಮ’ ಸಭೆ : ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು : ʼಅಧಿಕಾರ ಹಂಚಿಕೆ ಚರ್ಚೆʼ ಮಧ್ಯೆ ಹೈಕಮಾಂಡ್ ಸೂಚನೆಯಂತೆ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮಂತ್ರಿ ಡಿ.ಕೆ.ಶಿವಕುಮಾರ್ ಮುಖಿಮಾಖಿಯಾಗಿ, ಮಾತುಕತೆ ನಡೆಸಿದರು. ಈ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಇದು "ಬ್ರೇಕ್‌ಫಾಸ್ಟ್ ಮೀಟಿಂಗ್" ಅಲ್ಲ, ಎರಡು ಬಣಗಳ ನಡುವಿನ "ಕದನ ವಿರಾಮ" ಸಭೆ ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಬಹುನಿರೀಕ್ಷಿತ 'ಬೆಳಗಿನ ಉಪಾಹಾರ ಶೃಂಗಸಭೆ' ಅಂತೂ ಇಂತೂ ಜರುಗಿದೆ. ಅಸಲಿಗೆ ಇದನ್ನು "ಬ್ರೇಕ್‌ಫಾಸ್ಟ್ ಮೀಟಿಂಗ್" ಎಂದು ಕರೆಯುವುದು ಒಂದು ಔದಾರ್ಯವೇ ಸರಿ. ನಿಜ ಹೇಳಬೇಕು ಅಂದರೆ ಇದು ದಿನಬೆಳಗಾದರೆ ಒಬ್ಬರ ಮೇಲೊಬ್ಬರು ಹೊಂಚು ಹಾಕುವ, ಕತ್ತಿ ಮಸಿಯುವ ಎರಡು ಯುದ್ಧ ನಿರತ ಬಣಗಳ ಕಮಾಂಡರ್‌ಗಳ ನಡುವಿನ "ಕದನ ವಿರಾಮ" ಸಭೆಯಂತೆ ಕಾಣಿಸಿತು ಎಂದು ಲೇವಡಿ ಮಾಡಿದ್ದಾರೆ.
ಎಲ್ಲಕ್ಕಿಂತ ಮಿಗಿಲಾದ ಅತ್ಯಂತ ಹಾಸ್ಯಾಸ್ಪದ ಸಂಗತಿ ಏನೆಂದರೆ - ಇಬ್ಬರೂ ನಾಯಕರು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೆ ಮಾಧ್ಯಮಗಳನ್ನೇ ದೂಷಿಸುತ್ತಿರುವುದು. ಇಷ್ಟಕ್ಕೂ ಈ ಗೊಂದಲ ಸೃಷ್ಟಿಸಿದ್ದು ಯಾರು? ಮಾಧ್ಯಮಗಳೋ, ತಾವುಗಳೋ? ಎಂದು ಅವರು ಪ್ರಶ್ನಿಸಿದ್ದಾರೆ.
ನವೆಂಬರ್‌ನಲ್ಲಿ ‘ಕ್ರಾಂತಿ’ ಎಂದು ಕರೆ ನೀಡಿ, ಹೇಳಿಕೆಗಳ ಮೇಲೆ ಹೇಳಿಕೆ ಕೊಟ್ಟು, ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು ಪತ್ರಕರ್ತರಾ? "ಕೊಟ್ಟ ಮಾತು ಉಳಿಸಿಕೊಳ್ಳವವನು ನಿಜವಾದ ನಾಯಕ," "ಐದಾರು ಜನರ ಮಧ್ಯೆ ನಡೆದಿರುವ 'ವ್ಯಾಪಾರ'", "ಐದು ವರ್ಷ ನಾನೇ ಸಿಎಂ" ಎಂದೆಲ್ಲಾ ಬಹಿರಂಗ ಹೇಳಿಕೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿದ್ದು ಪತ್ರಕರ್ತರಾ? ಶಕ್ತಿ ಪ್ರದರ್ಶನಕ್ಕೆಂದು ಶಾಸಕರ ಗುಂಪುಗಳನ್ನು ಕಟ್ಟಿಕೊಂಡು ತಂಡ ತಂಡವಾಗಿ ದೆಹಲಿಗೆ ಹೋಗಿ, ಗುಪ್ತ ಸಭೆಗಳನ್ನು ನಡೆಸಿದ್ದು ಪತ್ರಕರ್ತರಾ? ಇವತ್ತು ರಾಜ್ಯದಲ್ಲಿ ಸೃಷ್ಟಿ ಆಗಿರುವ ಈ ಎಲ್ಲಾ ಗೊಂದಲಗಳಿಗೆ ಕಾರಣವೇನು ಗೊತ್ತೇ? ತಮ್ಮಿಬ್ಬರ ಒಣಪ್ರತಿಷ್ಠೆ, ಅಧಿಕಾರದ ಲಾಲಸೆ ಮತ್ತು ಶಾಸಕರ ಗುಂಪುಗಾರಿಕೆಯೇ ಕಾರಣವೇ ಹೊರತು, ನಿಮ್ಮ ನಾಟಕಗಳನ್ನು ವರದಿ ಮಾಡಿ ಸತ್ಯವನ್ನು ಬಿತ್ತರಿಸಿದ ಮಾಧ್ಯಮಗಳಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ತೋರಿಕೆಯ "ಏಕತೆಯ ಪ್ರದರ್ಶನ"ದ ಹಿಂದೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿರುವುದು ಬಿಡಿಸಲಾಗದ ಕಗ್ಗಂಟು ಮತ್ತು ಸಂಪೂರ್ಣವಾಗಿ ಒಡೆದ ಕನ್ನಡಿಯ ಚೂರುಗಳೇ ಹೊರತು, ಯಾವುದೇ ಪ್ರಾಮಾಣಿಕ ಮೈತ್ರಿಯಲ್ಲ. ಇದು ಕೇವಲ ಒಂದು ಕ್ಷಣಿಕ 'ಆಪ್ಟಿಕ್ಸ್' ಅಷ್ಟೇ ಎನ್ನುವುದು ಮಾತ್ರ ಗ್ಯಾರಂಟಿ ಎಂದು ಹೇಳಿದ್ದಾರೆ.







