ನಾಳೆ ರಾಷ್ಟ್ರೀಯ ಲೋಕ ಅದಾಲತ್

ಬೆಂಗಳೂರು: ವ್ಯಾಜ್ಯ ಮುಕ್ತ ಸಮಾಜದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‍ಎಲ್‍ಎಸ್‍ಎ) ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್ (ಜನತಾ ನ್ಯಾಯಾಲಯ) ಆಗಿದೆ.
ಕರ್ನಾಟಕ ಹೈಕೋರ್ಟ್‍ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಲೋಕ ಅದಾಲತ್ ವಿವರಗಳನ್ನು ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಪಿ. ಎಸ್.ದಿನೇಶ್ ಕುಮಾರ್ ಅವರು ನೀಡಿದರು.
ಪರಸ್ಪರ ಸಂಧಾನದ ಮೂಲಕ ಉಭಯ ಪಕ್ಷಕಾರರು ಒಪ್ಪಿ ತಮ್ಮ ವ್ಯಾಜ್ಯಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ವಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಮೇಲಿನ ಕಾರ್ಯಾಭಾರ ಕಡಿಮೆ ಮಾಡಬಹುದು. ನ್ಯಾಯಾಲಯದ ಅಮೂಲ್ಯ ಸಮಯ ಉಳಿತಾಯ ಮಾಡಬಹುದು. ಸರಕಾರ ಮತ್ತು ಕಕ್ಷಿದಾರರ ಆರ್ಥಿಕ ಹೊರೆ ಕಡಿಮೆ ಆಗಲಿದೆ ಎಂದು ನ್ಯಾ. ದಿನೇಶ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮತ್ತಿತರರು ಇದ್ದರು.







