ಪಡಿತರ ಅಕ್ಕಿಯಲ್ಲಿ ವಂಚನೆ ಆರೋಪ: ನ್ಯಾಯಬೆಲೆ ಅಂಗಡಿ ಅಮಾನತು
ಟ್ವಿಟರ್ ದೂರಿಗೆ ಸ್ಪಂದಿಸಿದ ಸಿಎಂ ಕಚೇರಿ

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ನ್ಯಾಯಬೆಲೆ ಅಂಗಡಿಯವರು ಪ್ರತಿ ಪಡಿತರ ಚೀಟಿಗೆ 1 ಕೆ.ಜಿ ಪಡಿತರ ಕಡಿಮೆ ವಿತರಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದ ಬೆನ್ನಲ್ಲೇ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ.
ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ನ್ಯಾಯಬೆಲೆ ಅಂಗಡಿಯವರು ಪ್ರತಿ ಪಡಿತರ ಚೀಟಿಗೆ 1 ಕೆ.ಜಿ ಪಡಿತರ ಕಡಿಮೆ ವಿತರಿಸುತ್ತಿರುವ ವಿಚಾರವನ್ನು ಚಂದ್ರಶೇಖರ್ ಎಂಬವರು ವೀಡಿಯೊ ದಾಖಲೆ ಸಹಿತ ಸಿಎಂ ಕಚೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ಟ್ವಿಟರ್ ನಲ್ಲಿ ಟ್ಯಾಗ್ ಮಾಡಿದ್ದರು.
ಚಂದ್ರಶೇಖರ್ ಅವರ ಟ್ವೀಟ್ ಗಮನಕ್ಕೆ ಬಂದ ತಕ್ಷಣ ಸಿಎಂ ಕಚೇರಿಯು ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಕಚೇರಿ @osd_cmkarnataka , ʼʼದೂರು ಕೇಳಿಬಂದ ಕೆಲವೇ ಗಂಟೆಗಳ ಒಳಗೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ವರದಿ ನೀಡಿರುತ್ತಾರೆ. ಅವರ ವರದಿ ಆಧರಿಸಿ ಜಿಲ್ಲಾಧಿಕಾರಿಯವರು ನಿಯಮ ಉಲ್ಲಂಘನೆ ಮಾಡಿರುವ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿ, ಪಡಿತರ ವಿತರಣೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆʼʼ ಎಂದು ತಿಳಿಸಿದೆ.
ʼʼದೂರುಗಳಿದ್ದರೆ ಗಮನಕ್ಕೆ ತನ್ನಿʼʼ
ʼʼನಾಡಿನ ಜನತೆಗೆ ನಾವು ಪಾರದರ್ಶಕ, ಜನಸ್ನೇಹಿ ಆಡಳಿತ ನೀಡಲು ಬದ್ಧರಿದ್ದು, ಜನರಿಗೆ ದೊರಕಬೇಕಿರುವ ಯೋಜನೆಗಳ ಲಾಭ ದುರ್ಬಳಕೆಯಾಗದಂತೆ ತಡೆಗಟ್ಟಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿʼʼ ಎಂದು ಸಿಎಂ ಕಚೇರಿ ಹೇಳಿದೆ.