ಪಡಿತರ ವಿತರಣೆಯಲ್ಲಿ ಲೋಪವಾದರೆ ಅಧಿಕಾರಿಗಳ ಮೇಲೆ ಕ್ರಮ : ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಡವರಿಗೆ ಪಡಿತರ ವಿತರಣೆಯ ಸಂದರ್ಭದಲ್ಲಿ ಲೋಪಗಳು ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಸಿದರು.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಎರಡನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಅನುಕೂಲವಾಗುತ್ತಿದೆ. ಯಾವೊಬ್ಬ ವ್ಯಕ್ತಿಯು ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ವಾಗಿದೆ ಎಂದು ಹೇಳಿದರು.
ಅನ್ಯಭಾಗ್ಯ ಯೋಜನೆಯ ದುರುಪಯೋಗ ತಡೆಗಟ್ಟಲು, ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ರಡಿ 4 ಹಂತಗಳಲ್ಲಿ ಅಂದರೆ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ನ್ಯಾಯ ಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿಗಳನ್ನು ರಚಿಸಿದ್ದೇವೆ. ರಾಜ್ಯ ಮಟ್ಟದ ಜಾಗೃತಿ ಸಮಿತಿಯಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.
ಆಹಾರ ಧಾನ್ಯಗಳ ಖರೀದಿ, ಸಂಗ್ರಹ, ವಿತರಣಾ ಪ್ರಕ್ರಿಯೆ, ಗೊದಾಮು, ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ ಇ ಫೋಸ್ ಯಂತ್ರಗಳ ಬಳಕೆ, ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಡಿತರ ವಿತರಣೆ ಬಗ್ಗೆ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಒಗ್ಗೂಡಿ ಸರಕಾರಕ್ಕೆ ಉತ್ತಮ ಹೆಸರು ತರವಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಶಾಸಕ ಇಕ್ಬಾಲ್ ಹುಸೇನ್, ಬಸವನಗೌಡ ಬಾದರ್ಲಿ, ನಾರಾಯಣಸ್ವಾಮಿ, ಭೀಮಣ್ಣ, ಮೋಹನ್ ಕುಮಾರ್ ದಾನಪ್ಪ, ಪುಷ್ಪ, ವಾಣಿ ಸಗರ್ಕರ್, ಆಯುಕ್ತ ರವಿಕುಮಾರ್, ನಿಗಮ ನಿರ್ದೇಶಕ ಜಗದೀಶ್, ಆಹಾರ ಆಯೋಗದ ಕಾರ್ಯದರ್ಶಿ ಸುಜಾತಾ ಹೊಸಮಣಿ, ಸಚಿವರ ಕಾರ್ಯದರ್ಶಿ ಡಾ.ಎಚ್.ನಟರಾಜ್, ಕಾನೂನು ಮಾಪನ ನಿಯಂತ್ರಕ ಎಂ.ಎಸ್. ಎನ್. ಬಾಬು, ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.







