ಐಪಿಎಲ್-2026 | ಆರ್‌ಸಿಬಿ ತಂಡದ ಸಹಭಾಗಿತ್ವ ಪಡೆದ ‘ನಂದಿನಿ’

ಬೆಂಗಳೂರು : ಐಪಿಎಲ್-2026ರ ಟಿ20 ಲೀಗ್ ಟೂರ್ನಮೆಂಟ್‍ಗೆ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಮಹಾ ಮಂಡಳ-ನಂದಿನಿ ಸಹಭಾಗಿತ್ವ ಪಡೆದಿದೆ ಎಂದು ಕರ್ನಾಟಕ ಹಾಲು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, 2026ರ ಐಪಿಎಲ್ ಟಿ20 ಲೀಗ್ ಟೂರ್ನಮೆಂಟ್ ಮಾ.28ರಿಂದ ಪ್ರಾರಂಭವಾಗಲಿದೆ. ಆರ್‌ಸಿಬಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವುದರ ಜೊತೆಗೆ ಐಪಿಎಲ್-2025ರ ಚಾಂಪಿಯನ್ ಸಹ ಆಗಿದೆ. ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಮತ್ತು ಗ್ರಾಹಕರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ನಂದಿನಿ ನಮ್ಮ ರಾಜ್ಯದ ಹೆಮ್ಮೆಯ ಕ್ರಿಕೆಟ್ ತಂಡ ಆರ್‌ಸಿಬಿ ಜೊತೆಗೆ ಕೈ ಜೋಡಿಸುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ.
ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದೆ. ನಂದಿನಿ ಬ್ರ್ಯಾಂಡ್ ಆರ್‌ಸಿಬಿ ತಂಡದ ಅಧಿಕೃತ ಡೈರಿ ಸಹಭಾಗಿತ್ವ ಹೊಂದುವ ಮೂಲಕ ಎರಡು ಐಕಾನಿಕ್ ಬ್ರ್ಯಾಂಡ್‍ಗಳ ಒಕ್ಕೂಟವಾಗಿದೆ. ಕ್ರೀಡೆಯನ್ನು ಬೆಂಬಲಿಸುವ ನಂದಿನಿ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸಹಭಾಗಿತ್ವದ ಭಾಗವಾಗಿ ನಂದಿನಿ ವಿವಿಧ ಜಾಹೀರಾತು ಚಟುವಟಿಕೆಗಳು ಮತ್ತು ಕಾರ್ಯಕ್ರಮ, ಅಭಿಯಾನಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.







