ಬಿಡದಿ ಟೌನ್ಶಿಪ್ ವಿಚಾರವಾಗಿ ಪಂಥಾಹ್ವಾನಕ್ಕೆ ನಾನು ಸಿದ್ಧ, ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಬರಲಿ: ಡಿ.ಕೆ.ಶಿವಕುಮಾರ್ ಸವಾಲು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಬಿಡದಿ ಟೌನ್ಶಿಪ್ ವಿಚಾರವಾಗಿ ನೀಡಿರುವ ಪಂಥಾಹ್ವಾನವನ್ನು ಸ್ವೀಕರಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆಗೆ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಬರಲಿ. ಆದರೆ, ನನಗೆ ಮೂರು ದಿನ ಮುಂಚೆಯೇ ಸಮಯ, ಸ್ಥಳ ನಿಗದಿ ಮಾಡಿದರೆ ಹಾಜರಾಗುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಬುಧವಾರ ಕುಮಾರ ಕೃಪಾದ ಸರಕಾರಿ ಗೃಹ ಕಚೇರಿಯಲ್ಲಿ ಬಿಡದಿ ಟೌನ್ಶಿಪ್ ಯೋಜನೆ ಕುರಿತು ರೈತರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಪಂಥಾಹ್ವಾನದ ಬಗ್ಗೆ ಅಲ್ಲಿನ ರೈತರೇ ಸ್ವೀಕಾರ ಮಾಡಲು ಮುಂದಾಗಿದ್ದಾರೆ. ಆದರೆ, ನಾನೇ ಅವರ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿದ್ದು, ನನಗೆ ಮೂರು ದಿನ ಮುಂಚೆ ಸಮಯ, ಸ್ಥಳ ನಿಗದಿ ಮಾಡಿದರೆ ಹಾಜರಾಗುತ್ತೇನೆ. ಜತೆಗೆ, ರಿಯಲ್ ಎಸ್ಟೇಟ್ ಮಾಫಿಯಾ ಎಂದಿರುವ ಎಚ್.ಡಿ. ದೇವೇಗೌಡ ಅವರು ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ದೇವೇಗೌಡರ ಕುಟುಂಬದವರು ಹಾಸನದಲ್ಲೇ ಜಮೀನು ಖರೀದಿ ಮಾಡಬಹುದಾಗಿತ್ತು. ಆದರೆ, ಬಿಡದಿಗೆ ಬಂದು ಜಮೀನು ತೆಗೆದುಕೊಂಡಿದ್ದಾರೆ. ಅವರು, ತಮ್ಮಣ್ಣ ಅವರು, ಅವರ ಪತ್ನಿ, ಅವರ ಬೀಗರುಗಳು ಎಲ್ಲರೂ ಇಲ್ಲಿಯೇ ಜಮೀನು ಖರೀದಿ ಮಾಡಿದ್ದಾರೆ. ದೇವಗೆರೆಯಲ್ಲಿ ರೇವಣ್ಣ ಅವರು ಸೇರಿದಂತೆ 200 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಬಿಎಂಐಸಿಪಿ ವ್ಯಾಪ್ತಿಯಲ್ಲಿ ದೇವಗೆರೆ ಹಾಗೂ ಕೇತಗಾನಹಳ್ಳಿಯನ್ನು ಸೇರಿಸಿಕೊಂಡಿದ್ದಾರೆ. ರೈತರ ಹಿತದ ಕಾಪಾಡುವವರಾಗಿದ್ದರೆ, ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ದೇವಗೆರೆಯಲ್ಲಿ ಹಾಗೂ ಕೇತಗಾನಹಳ್ಳಿಯಲ್ಲಿರುವ ಅವರ ಜಮೀನು ಬಿಎಂಐಸಿಪಿ ಯೋಜನೆ ವ್ಯಾಪ್ತಿಯಲ್ಲಿ ಬರಬೇಕು. ಆದರೆ ಭೂ ಸ್ವಾಧೀನ ಮಾತ್ರ ಆಗಬಾರದು ಎಂದರೆ ಹೇಗೆ? ಅಲ್ಲಿ 38 ಎಕರೆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಪಡೆದು, ಇದೀಗ ಪರಿಹಾರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ದೇವೇಗೌಡರು ಬಿಡದಿ ಯೋಜನೆ ವಿರುದ್ಧ ಹೋರಾಟ ಪ್ರಾರಂಭ ಮಾಡುತ್ತೇನೆ ಹಾಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರು ಪ್ರಧಾನಿ ಮೋದಿಗೆ, ಅವರ ಬೇರೆ ನಾಯಕರಿಗೆ ಪತ್ರ ಬರೆಯಬೇಕು. ನಮ್ಮ ನಾಯಕರಿಗೆ ಪತ್ರ ಬರೆದರೆ ಪ್ರಯೋಜನವೇನು. ಅಲ್ಲದೆ, ಒತ್ತಡಕ್ಕೆ ಮುಖ್ಯಮಂತ್ರಿಯವರು ಮಣಿಯಬಾರದು. ರಿಯಲ್ ಎಸ್ಟೇಟ್ ಮಾಫಿಯಾ ಎಂದೂ ಟೀಕಿಸಿದ್ದಾರೆ. ಆದರೆ, ರಿಯಲ್ ಎಸ್ಟೇಟ್ ಮಾಫಿಯಾ ಮಾಡಿದವರು ಯಾರು? ಡಿಎಲ್ಎಫ್ಗೆ ಮಾರಿದವರು ಯಾರು? ಅವರ ಮಗ ಪಂಥಾಹ್ವಾನ ನೀಡಿದ್ದಾರಲ್ಲವೇ ಅವರ ಜೊತೆ ಇವರೂ ಚರ್ಚೆಗೆ ಬರಲಿ ಎಂದು ಶಿವಕುಮಾರ್ ಹೇಳಿದರು.
ಡಿನೋಟಿಫಿಕೇಶನ್ ಮಾಡಲಿಲ್ಲ: ಈ ಯೋಜನೆಗೆ ಅಧಿಸೂಚನೆ ಹೊರಡಿಸಿದವರು ಕುಮಾರಸ್ವಾಮಿ. ನಾನು ಈ ಯೋಜನೆ ಕೈಬಿಡಬಹುದೇ ಎಂದು ಆಲೋಚನೆ ಮಾಡಿದೆ. ನಾನು, ಕಾಗೋಡು ತಿಮ್ಮಪ್ಪ ಅವರು ಭೈರಮಂಗಲಕ್ಕೆ ಬಂದು ಪರಿಶೀಲನೆ ಮಾಡಿದಾಗ ಇಲ್ಲಿ ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪುಗಳು ಬಂದಿವೆ. ಹೀಗಾಗಿ ಇದನ್ನು ಡಿನೋಟಿಫಿಕೇಷನ್ ಮಾಡಲು ಯಾರೂ ಧೈರ್ಯ ಮಾಡಲಿಲ್ಲ. ನಾನು ಇದನ್ನು ಮಾಡಲಿಲ್ಲ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಡಿನೋಟಿಫಿಕೇಷನ್ ಪ್ರಕರಣ ಅನುಭವಿಸಿದ್ದಾರೆ. ಈ ಯೋಜನೆ ಕೈಬಿಡುವುದಾದರೇ ಅವರೇ ಡಿನೋಟಿಫಿಕೇಶನ್ ಮಾಡಬಹುದಿತ್ತಲ್ಲವೇ? ಬಿಜೆಪಿ ಸರಕಾರದಲ್ಲಿ 900 ಎಕರೆಯನ್ನು ಕೆಐಎಡಿಬಿಗೆ ಜಮೀನು ನೀಡಿದಾಗ ಕುಮಾರಸ್ವಾಮಿ ಯಾಕೆ ಮಾತನಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಪ್ರದೇಶವನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದ್ದು, ಈ ಜಮೀನನ್ನು ಯಾರೂ ಮಾರಾಟ ಮಾಡುವಂತಿಲ್ಲ. ನಿಜವಾದ ರೈತರು ಈ ವಿಚಾರ ಅರ್ಥ ಮಾಡಿಕೊಂಡಿದ್ದಾರೆ. ರಾಜಕೀಯ ಬೆಳೆಸಿಕೊಂಡಿರುವವರು ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡಲಿ. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವಿಚಾರ ಬಂದಾಗ ಇದಕ್ಕೆ ಸುರೇಶ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದ್ದರು. ಆಗ ಮಂಜುನಾಥ್ ಅವರು ನಮ್ಮ ಪಕ್ಷದಲ್ಲಿದ್ದರು. ನಾನು ಬೇಡ ಎಂದು ಹೇಳಿದೆ. ಬೇಕಾದರೆ ಮಂಜುನಾಥ್ ಅವರೇ ಅಧ್ಯಕ್ಷರಾಗಲಿ ಎಂದು ಹೇಳಿದ್ದೆ ಎಂದೂ ಉಲ್ಲೇಖಿಸಿದರು.
ಈ ಜಿಲ್ಲೆಯನ್ನು ರಾಮನಗರದಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದ ಬಳಿಕ ನಿಮ್ಮ ಆಸ್ತಿ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂದು ಒಮ್ಮೆ ನೋಡಿ. ಇದನ್ನು ತಡೆಯಲು ಕುಮಾರಸ್ವಾಮಿ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ ನಾನು ಇದನ್ನು ಮಾಡಿದ್ದೇನೆ. ಈಗ ಡಾ.ಜಿ. ಪರಮೇಶ್ವರ್ ಅವರು ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಲು ಕೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಅವರಿಗೆ ನಮ್ಮ ತೀರ್ಮಾನದ ಮೌಲ್ಯ ಅರ್ಥವಾಗಿದೆ ಎಂದು ಅವರು ತಿಳಿಸಿದರು.
ಭೂ ಸ್ವಾಧೀನ ಆರಂಭಿಸಿದ್ದೇ ಅಪ್ಪ-ಮಕ್ಕಳು: ಇದಕ್ಕೂ ಮುನ್ನ ರೈತರೊಂದಿಗೆ ಚರ್ಚೆ ನಡೆಸಿದ ಶಿವಕುಮಾರ್ ಅವರು, ‘ನಾನು ರೈತನೇ. ಮೇಕೆದಾಟು ಯೋಜನೆಯಲ್ಲಿ ನಮ್ಮ ನೂರಾರು ಎಕರೆ ಜಮೀನು ಮುಳುಗಡೆ ಯಾಗುತ್ತದೆ. ಯಾವ ರೈತರೂ ಆಸ್ತಿ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಈ ಬಿಡದಿ ಟೌನ್ಶಿಪ್ ಯೋಜನೆ ಯಾರಿಂದ ಶುರುವಾಯಿತು? ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಬಂದಿದ್ದು ಯಾರಿಂದ? ಮಾಜಿ ವಿಧಾನ ಪರಿಷತ್ತು ಸದಸ್ಯ ಸಿಎಂ ಲಿಂಗಪ್ಪ ಇದ್ದಾಗ ನಾನು ಭೂ ಸ್ವಾಧೀನಕ್ಕೆ ಅವಕಾಶ ನೀಡಿರಲಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರು ಬಂದ ನಂತರ ಈ ಭೂಸ್ವಾಧೀನ ಆರಂಭವಾಯಿತು ಎಂದು ಅವರು ವಿವರಿಸಿದರು.
ಜೂನ್ನಲ್ಲಿ ಪರಿಹಾರ ಬಿಡುಗಡೆ:
‘ಇಂದು ಬಿಡದಿ ಭಾಗದ ರೈತರೊಂದಿಗೆ ಚರ್ಚೆ ಮಾಡಿದ್ದೇನೆ. ಬಿಡದಿ ಟೌನ್ಶಿಪ್ಗೆ ಜಮೀನು ನೀಡಿರುವ ರೈತರಿಗೆ ಜೂನ್ ಮೊದಲನೇ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮ ವಹಿಸುತ್ತೇನೆ. ಮೂರು, ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾದ ಅಂತಿಮ ಹಂತದ ನೋಟಿಫಿಕೇಶನ್ ಮಾಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಬಿದಡಿ ಟೌನ್ಶಿಪ್ ವಿಚಾರವಾಗಿ ಅಲ್ಲಿನ ಶೇ.80ರಷ್ಟು ರೈತರು ಒಪ್ಪಿಗೆ ನೀಡಿದ್ದು. ಆದಷ್ಟು ಬೇಗ ಪರಿಹಾರ ವಿತರಿಸಿ ಎಂದು ಒತ್ತಾಯ ಮಾಡಿದ್ದಾರೆ. ಭೂ ರಹಿತರ ಬಗ್ಗೆ ಕಾಳಜಿ ವಹಿಸಿದ್ದು ಈ ವಿಚಾರ ಬಗೆಹರಿಸಲಾಗುವುದು’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ






