ಅಧಿಕಾರದಲ್ಲಿ ಉಳಿಯಬೇಕೆಂಬುದೇ 1975ರ ತುರ್ತು ಪರಿಸ್ಥಿತಿ ಹಿಂದಿನ ಕಾರಣ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು 1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದ್ಯಾಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಹೀಗಾಗಿ ಅಧಿಕಾರದಲ್ಲಿ ಉಳಿಯಬೇಕೆಂಬುದೇ ತುರ್ತು ಪರಿಸ್ಥಿತಿ ಹೇರುವಿಕೆಯ ಹಿಂದಿನ ಕಾರಣವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದಲ್ಲಿರುವ ಪುರಭವನದಲ್ಲಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್-ಬೆಂಗಳೂರು’ ವತಿಯಿಂದ ಆಯೋಜಿದ್ದ ‘1975ರ ತುರ್ತು ಪರಿಸ್ಥಿತಿ 50ನೇ ವರ್ಷ-ಕರಾಳ ದಿನಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಪೂರ್ಣ ಅಂಕುಶ ಹಾಕಲಾಗಿತ್ತು ಎಂದರು.
1975ರ ತುರ್ತು ಪರಿಸ್ಥಿತಿ ಸಮಯದಲ್ಲಿ ಕೇವಲ ಅಧಿಕಾರಕ್ಕಾಗಿ ನಮ್ಮ ಪವಿತ್ರ ಸಂವಿಧಾನವನ್ನೇ ಆಗ ಬಲಿ ಕೊಡಲಾಗಿತ್ತು. ಆಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ತಮ್ಮ ನಿರಂಕುಶ ಅಧಿಕಾರಕ್ಕಾಗಿ ಸ್ವಾತಂತ್ರ್ಯದ ಧ್ವನಿಗಳ ಕೊರಳನ್ನು ಹಿಸುಕಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.
ಆರ್ಥಿಕ ಚಿಂತಕ ಎಸ್.ಗುರುಮೂರ್ತಿ ಮಾತನಾಡಿ, 2024ರಲ್ಲಿ ರಾಹುಲ್ ಗಾಂಧಿಯವರು ಗೆದ್ದ ಬಳಿಕ ಸಂವಿಧಾನದ ಪುಸ್ತಕ ಪ್ರದರ್ಶಿಸಲು ಆರಂಭಿಸಿದರು ಹಾಗೂ ಸಂವಿಧಾನವನ್ನು ತಾವು ರಕ್ಷಿಸಲು ಬಯಸುವುದಾಗಿ ಹೇಳಿದರು. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೇ ಸಂವಿಧಾನವನ್ನು ಅವರ ಅಜ್ಜಿ ಕಡೆಗಣಿಸಿದ್ದು, ರಾಹುಲ್ ಗಾಂಧಿಯವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ರಾಜ್ಯ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು. ಇದು ನಿಜವಲ್ಲದಿದ್ದರೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದ ಆಶೋತ್ತರಗಳ ಕತ್ತು ಹಿಸುಕಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಪ್ರಮಾದವನ್ನು ಕಾಂಗ್ರೆಸ್ ಮಾಡುತ್ತಿರಲಿಲ್ಲ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ