ತಮಿಳುನಾಡಿಗೆ ಮತ್ತೆ ನೀರು ಹರಿಸಲು ಶಿಫಾರಸು; ಮಂಡ್ಯದಲ್ಲಿ ರೈತರಿಂದ ಹೆದ್ದಾರಿ ತಡೆ, ಕಾವೇರಿ ನದಿಗಿಳಿದು ಪ್ರತಿಭಟನೆ

ಮಂಡ್ಯ, ಸೆ.14: ರಾಜ್ಯದಿಂದ ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನವ ದೆಹಲಿಯಲ್ಲಿ ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆಗೆ ಶಿಫಾರಸು ಮಾಡಿರುವ ಸುದ್ದಿ ಹೊರಬೀಳುತ್ತದ್ದಂತೆ ರೈತರು, ಪ್ರಗತಿಪರ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿಹಚ್ಚಿ ಹೆದ್ದಾರಿ ಸಂಚಾರ ತಡೆದರು. ಮತ್ತೊಂದೆಡೆ ಭೂಮಿತಾಯಿ ಹೋರಾಟ ಸಮಿತಿಯ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ರಸ್ತೆತಡೆ ನಡೆಸಿ ನಿಂತ್ರಯಣ ಸಮಿತಿ ವಿರುದ್ಧ ಘೋಷಣೆ ಕೂಗಿದರು.
ಈಗಾಗಲೇ ಸಮಿತಿ ಮತ್ತು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಸುಮಾರು 34 ಟಿಎಂಸಿ ನೀರು ಹರಿಸಲಾಗಿದೆ. ಮತ್ತೆ 15 ದಿನಗಳ ಕಾಲ ನೀರುಹರಿಸಲು ಶಿಫಾರಸು ಮಾಡಿರುವುದು ಖಂಡನೀಯ. ರಾಜ್ಯ ಸರಕಾರ ನೀರು ಬಿಡದಿರುವ ದೃಢಸಂಕಲ್ಪ ಮಾಡಿ ನಮ್ಮ ರೈತರನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ತಾಕೀತು ಮಾಡಿದರು.
ಬುಧವಾರ ರೈತ ಹಿತರಕ್ಷಣಾ ಸಮಿತಿ ಸಭೆ
ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆಗೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಳೆ(ಸೆ.13) ತುರ್ತುಸಭೆ ಕರೆದಿದೆ.
ನಿಯಂತ್ರಣ ಸಮಿತಿಯ ತೀರ್ಮಾನವನ್ನು ತೀವ್ರವಾಗಿ ಖಂಡಿಸಿರುವ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಈ ನಿರ್ಧಾರ ಕಾವೇರಿ ಕೊಳ್ಳದ ರೈತರ ಪಾಲಿಗೆ ಕರಾಳವಾದ ತೀರ್ಪಾಗಿದೆ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ನಮ್ಮ ಜಲಾಶಯಗಳು ಖಾಲಿಯಾಗುತ್ತಾ ಬಂದಿವೆ. ರಾಜ್ಯ ಸರಕಾರ ಈ ಆದೇಶಕ್ಕೆ ಮಣಿಯಬಾರದು. ಇರುವ ನೀರನ್ನು ಕುಡಿಯಲು ಉಳಿಸಿಕೊಳ್ಳಬೇಕು. ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚಿಸಲು ಬುಧವಾರ ಬೆಳಗ್ಗೆ 9:00 ಗಂಟೆಗೆ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರು, ಪ್ರಗತಿಪರ ಸಂಘಟನೆಗಳ ಹಾಗೂ ನಾಗರಿಕ ಬಂಧುಗಳ ತುರ್ತುಸಭೆ ಕರೆಯಲಾಗಿದ್ದು ಎಲ್ಲರೂ ಆಗಮಿಸಬೇಕೆಂದು ಅವರು ಮನವಿ ಮಾಡಿದ್ದಾರೆ.







