ನ.11ಕ್ಕೆ ಮಾಲೂರು ಕ್ಷೇತ್ರದ ‘ಮರು ಮತ ಎಣಿಕೆ’

ಮಾಲೂರು ಶಾಸಕ ಕೆ.ವೈ.ನಂಜೇಗೌಡ
ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕರ್ನಾಟಕ ಚುನಾವಣಾ ಆಯೋಗವು ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತಎಣಿಕೆಗೆ ನಿಗದಿ ಮಾಡಿದ್ದು, ನ.11ರಂದು ಮರು ಮತಎಣಿಕೆ ಮಾಡಬೇಕು ಎಂದು ಕೋಲಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಮಂಗಳವಾರದಂದು ಸಹಾಯಕ ಮುಖ್ಯ ಚುನಾವಣಾ ಅಧಿಕಾರಿ ರಾಘವನ್ ಆರ್.ವಿ. ಅವರು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಸುಪ್ರೀಂ ಕೋರ್ಟ್ ಅ.14ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನು ನೀಡಿತ್ತು. ಇದೀಗ ಆಯೋಗವು ಮತಗಳ ಮರು ಎಣಿಕೆಗೆ ದಿನಾಂಕವನ್ನು ನಿಗಧಿಪಡಿಸಿದ್ದು, ಅಗತ್ಯ ಸೂಚನೆಗಳನ್ನು ಪಾಲಿಸಬೇಕು ಎಂದಿದೆ.
ಪ್ರಕರಣದ ಹಿನ್ನೆಲೆ: 2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಂಜೇಗೌಡ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಮತ ಎಣಿಕೆ ಸರಿಯಾಗಿ ಆಗಿಲ್ಲ. ಹೀಗಾಗಿ ಕೆ.ವೈ.ನಂಜೇಗೌಡ ಅವರ ಶಾಸಕ ಸ್ಥಾನ ಅಸಿಂಧುಗೊಳಿಸುರವಂತೆ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೇ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ನಂಜೇಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ತಡೆ ನೀಡಿದೆ. ಆದರೆ ಮತಗಳ ಮರು ಎಣಿಕೆಗೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.







