ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ, ಇಲ್ಲವಾದಲ್ಲಿ ಅಧಿಕಾರ ಬಿಟ್ಟು ತೊಲಗಿ : ಶೋಭಾ ಕರಂದ್ಲಾಜೆ

ಬೆಂಗಳೂರು : ಏರಿಕೆಯಾಗಿರುವ ಅಗತ್ಯ ಎಲ್ಲ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿ, ಇಲ್ಲವಾದರೆ ಕಾಂಗ್ರೆಸ್ಸಿನವರು ಕೂಡಲೇ ಅಧಿಕಾರ ಬಿಟ್ಟು ತೊಲಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಸೋಮವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ‘ಹಾಲಿನ ಬೆಲೆ ಏರಿಕೆ’ಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಸರಕಾರದ ಆಡಳಿತ ಶೂನ್ಯಕ್ಕೆ ಬಂದಿದೆ. ಇವತ್ತು ತಳಮಟ್ಟಕ್ಕೆ ಬಂದಿದೆ ಎಂದು ಟೀಕಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯೋತ್ಸವದ ಕೊಡುಗೆ ಏನು?, ನಿಮ್ಮ ಅಂತಸ್ತನ್ನು ನೋಡಿ ರಾಜ್ಯದ ಜನರ ಅಂತಸ್ತು ನಿರ್ಧರಿಸದಿರಿ. ಹಾಲಿಗೆ ನೀವು ದುಡ್ಡು ಕೊಡಬಹುದು, ಆದರೆ ದುಡಿಯುವ ವರ್ಗಗಳಾದ ಕೂಲಿ ಕೆಲಸ ಮಾಡುವವರು, ಟ್ಯಾಕ್ಸಿ, ರಿಕ್ಷಾ ಓಡಿಸುವವರು, ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕುವವರಿಗೆ ಕಷ್ಟವಾಗಿದೆ. ಸಿಕ್ಕಿದ ಸಂಬಳದಲ್ಲಿ ಮನೆ ಬಾಡಿಗೆ, ವಿದ್ಯುತ್, ನೀರು, ಕಸದ ಬಿಲ್ ಕಟ್ಟಬೇಕು. ಅದರ ಜೊತೆಗೆ ಪ್ರತಿವರ್ಷ ನೀವು ಏರಿಸುವ ಹಾಲು-ಮೊಸರಿನ ದರಕ್ಕೆ ಹಣ ಕೊಡಬೇಕಾಗಿದೆ ಎಂದು ಅವರು ಆಕ್ಷೇಪಿಸಿದರು.
ರಾಜ್ಯದಲ್ಲಿ ಮಳೆ ಬಂದಿಲ್ಲ, ತೀವ್ರ ಬರಗಾಲ ಇದೆ. ಸರಕಾರವು ರೈತರಿಗೆ ಎಕರೆಗೆ ಭಿಕ್ಷೆ ಕೊಟ್ಟ ಹಾಗೆ ಎರಡುವರೆ ಸಾವಿರ ರೂಪಾಯಿ ಕೊಟ್ಟಿದೆ ಎಂದು ಟೀಕಿಸಿದರು.
ಯಡಿಯೂರಪ್ಪನವರ ಬಿಜೆಪಿ ಸರಕಾರ ಕೇಂದ್ರ ಕೊಡುವ ಕಿಸಾನ್ ಸಮ್ಮಾನ್ ಯೋಜನೆಯ ಜೊತೆ 4ಸಾವಿರ ರೂ. ಕೊಡುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ರೈತರಿಗೆ ಬಿಎಸ್‍ವೈ ಕೊಡುವ ಹಣವನ್ನು ನಿಲ್ಲಿಸಿದ್ದಾರೆ. ಎರಡುವರೆ ಸಾವಿರ ರೂ. ಭಿಕ್ಷೆಗೆ 18 ಷರತ್ತು ಹಾಕಿದ್ದಾರೆ ಎಂದು ಅವರು ಖಂಡಿಸಿದರು.
ಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರವು ಹಾಲಿನ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಾಲಿಗೆ ಪ್ರೋತ್ಸಾಹಧನ ನೀಡಬೇಕು. ಹಾಲಿನ ಬೆಲೆ ಏರಿಕೆ ಖಂಡಿಸಿ ಈಗ ನಾವೆಲ್ಲರೂ ಇಡೀ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಈ ಸರಕಾರವು ಹಾಲಿನ ದರವನ್ನು ನಾಲ್ಕು ಬಾರಿ ಏರಿಸಿದೆ. ಒಂದು ಲೀಟರ್ ಹಾಲಿಗೆ 4 ರೂಪಾಯಿ ಏರಿಸಿದ್ದರು. ಬಳಿಕ 3 ರೂಪಾಯಿ ಏರಿಸಿದ್ದರು. ನಂತರ 2 ರೂ. ಹೆಚ್ಚಿಸಿದ್ದರು. ಆಮೇಲೆ ಈಗ 8 ರೂ. ಹೇಳಿದ್ದಾರೆ. ಆದರೆ, ಲೆಕ್ಕ ಮಾಡಿದರೆ ಅದು 12 ರೂ. ಗಳಿಗಿಂತ ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು.
ರೈತ ಮೋರ್ಚಾ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ, ಮುಖಂಡರಾದ ಪೂರ್ಣಿಮಾ ಪ್ರಕಾಶ್, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ದೇವಿ, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೀತು ಎನ್.ಎಂ.ರೆಡ್ಡಿ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ವೇತಾ ರಾಘವೇಂದ್ರ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.






