ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ಷರತ್ತು ಸಡಿಲಿಸಿ: ಶಿವಾನಂದ ತಗಡೂರು

ಬೆಂಗಳೂರು: ಗ್ರಾಮೀಣ ಪತ್ರಕರ್ತರ ಬಸ್‍ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿರುವ ಕಠಿಣ ಷರತ್ತುಗಳನ್ನು ಸಡಿಲಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬಜೆಟ್‍ನಲ್ಲಿ ಘೋಷಣೆ ಮಾಡಿದಂತೆ ಮೊದಲ ಹಂತದಲ್ಲಿ 5,500 ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ನೀಡಬೇಕಾಗಿತ್ತು. ಆದರೆ ಈ ತನಕ ಕನಿಷ್ಠ 200 ಜನ ಪತ್ರಕರ್ತರಿಗೂ ಬಸ್‍ಪಾಸ್ ನೀಡದಿರುವುದು ಅತ್ಯಂತ ವಿμÁದದ ಸಂಗತಿ ಎಂದು ಹೇಳಿದ್ದಾರೆ.
ಬಸ್‍ಪಾಸ್‍ಗೆ ವಿಧಿಸಿರುವ ಕೆಲವು ಕಠಿಣ ಷರತ್ತುಗಳನ್ನು ಸಡಿಲಿಸಬೇಕು. ಕಾರ್ಯನಿರತ ಪತ್ರಕರ್ತರ ಸಂಘ ಈ ಹಿಂದೆಯೇ ಹಲವು ಬಾರಿ ಪತ್ರ ಬರೆದು ವಿನಂತಿಸಿತ್ತು. ಆದರೂ ಸರಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ಹೇಳಿದ್ದಾರೆ.
ಗ್ರಾಮೀಣ ಪತ್ರಕರ್ತರ ಬಸ್‍ಪಾಸ್ ಪಡೆಯಲು ಜಿಲ್ಲಾ ಮತ್ತು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಅರ್ಹರಾಗಿರುತ್ತಾರೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಪೂರ್ಣಾವಧಿ ನೇಮಕಾತಿ ಇರುವುದಿಲ್ಲ. ಆದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪತ್ರಿಕಾ ಸಂಸ್ಥೆಗಳು, ಸಂಪಾದಕರು ನೀಡುವ ದೃಢೀಕರಣವನ್ನು ಆಧರಿಸಿ ಬಸ್‍ಪಾಸ್ ನೀಡಬೇಕು ಎಂದು ವಿನಂತಿಸಿದ್ದಾರೆ.
ಮಾನ್ಯತೆ ಪಡೆದ ಜಿಲ್ಲಾಮಟ್ಟದ ಪತ್ರಿಕೆಗಳಿಗೆ ತಾಲೂಕು ಮಟ್ಟದಿಂದ ವರದಿಗಾರರಾಗಿರುವ ಎಲ್ಲ ಪತ್ರಕರ್ತರಿಗೆ ಬಸ್‍ಪಾಸ್ ನೀಡಬೇಕು. ಹೋಬಳಿ ಹಂತದಲ್ಲಿಯೂ ಹಲವು ಪತ್ರಿಕೆಗಳಿಗೆ ವರದಿಗಾರರು ಇರುವುದರಿಂದ ಅವರಿಗೂ ಬಸ್‍ಪಾಸ್ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.







