“ಹಣ ಬಿಡುಗಡೆ ಮಾಡದಿದ್ದರೆ ಲಂಚ ತಿಂದ ಶಾಸಕರ ಹೆಸರು ಬಹಿರಂಗ”: ಸರಕಾರಕ್ಕೆ ನವೆಂಬರ್ ಗಡುವು ಕೊಟ್ಟ ಗುತ್ತಿಗೆದಾರರ ಸಂಘ

ಬೆಂಗಳೂರು: ನವೆಂಬರ್ ಅಂತ್ಯದೊಳಗೆ ಕಾಮಗಾರಿ ನಿರ್ವಹಿಸಿರುವ ಬಾಕಿ ಬಿಲ್‍ಗಳಿಗೆ ಹಣ ಬಿಡುಗಡೆ ಮಾಡದಿದ್ದರೆ ಡಿಸೆಂಬರ್ ನಲ್ಲಿ ಲಂಚ ಪಡೆದಿರುವ ಶಾಸಕರ ಹೆಸರನ್ನು ಬಹಿರಂಗ ಪಡಿಸಿ ಅವರನ್ನು ದೇವರ ಮುಂದೆ ಪ್ರಮಾಣ ಮಾಡುವಂತೆ ಆಹ್ವಾನಿಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರಕಾರಕ್ಕೆ ಸವಾಲು ಹಾಕಿದೆ.
ಈ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಸರಕಾರದ ವಿವಿಧ ಇಲಾಖೆಗಳಿಂದ ಅಂದಾಜು 37,970 ಸಾವಿರ ಕೋಟಿ ರೂ. ಬಾಕಿ ಬಿಲ್‍ಗಳಿವೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಮಗೆ ಸಹಾಯ ಮಾಡಲಿಲ್ಲ. ಅಂದಿನ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್, ಫ್ರೀಡಂಪಾರ್ಕ್‍ನಲ್ಲಿ ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದು ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು ಎಂದರು.
ಮುಖ್ಯಮಂತ್ರಿ ಆದ ಬಳಿಕ ಡಿ.ಕೆ.ಶಿವಕುಮಾರ್, ಜೂ.30ರಂದು ನಡೆದ ಸಭೆಯಲ್ಲಿ ಬಾಕಿ ಬಿಲ್‍ಗಳಿಗೆ ಹಣ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದರೂ ಇದುವರೆಗೆ ಈಡೇರಿಲ್ಲ. ಹಾಗಾಗಿ, ನಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಆರ್.ಮಂಜುನಾಥ್ ಎಚ್ಚರಿಕೆ ನೀಡಿದರು.
ಹಿಂದಿನ ಸರಕಾರಕ್ಕಿಂತ ಈಗಿನ ಸರಕಾರದಲ್ಲಿ ಕಮಿಷನ್ ದಂಧೆ ಹೆಚ್ಚಳವಾಗಿದೆ. ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಸಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೇ.75ರಷ್ಟು ಶಾಸಕರು, ಟೆಂಡರ್‍ಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಅನುದಾನ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಟೆಂಡರ್ ನಡೆಸಬಾರದು. ಕೂಡಲೇ ಕಾಂಟ್ರಾಕ್ಟ್ ಮ್ಯಾನೇಜ್‍ಮೆಂಟ್(ಒಪ್ಪಂದ ನಿರ್ವಹಣೆ) ರದ್ದುಗೊಳಿಸಬೇಕು. 4 ವರ್ಷದಿಂದ ಬಾಕಿ ಬಿಲ್‍ಗಳಿಗೆ ಹಣ ಬಿಡುಗಡೆ ಆಗದ ಹಿನ್ನೆಲೆಯಲ್ಲಿ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಣ ಬಿಡುಗಡೆಯಾಗದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ಇದೆ ಎಂದು ಆರ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಇಲಾಖೆಗಳಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಬೇಕು. 2017 ಮತ್ತು 2018ರಲ್ಲಿ ವ್ಯಾಟ್‍ನಿಂದ ಜಿಎಸ್‍ಟಿ ವ್ಯತ್ಯಾಸದ ಮೊತ್ತ ಶೇ.8ರಷ್ಟು ತುರ್ತಾಗಿ ನೀಡಲು ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಟೆಂಡರ್ ಸಿಗುತ್ತಿಲ್ಲ ಎಂದು ಆರ್.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಪಧಾದಿಕಾರಿಗಳಾದ ಬಿ.ಸಿ.ದಿನೇಶ್, ಹನುಮಂತಯ್ಯ, ಕೃಷ್ಣೇಗೌಡ, ಗುರುಸಿದ್ಧಪ್ಪ, ಜಿ.ಎಂ.ರವೀಂದ್ರ, ಜಗದೀಶ್, ಸಿ.ಡಿ.ಕೃಷ್ಣ, ಯತಿರಾಜು, ಡಿ.ಎಂ.ನಾಗರಾಜು, ಕೃಷ್ಣರೆಡ್ಡಿ ಸೇರಿ ಮತ್ತಿತರರಿದ್ದರು.
ಕಮಿಷನ್ ಕೊಟ್ಟರಷ್ಟೇ ಭೂಮಿ ಪೂಜೆಗೆ ಬರ್ತಾರೆ ಶಾಸಕರು!:
ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದ ಸಚಿವರಿಗೆ, ಶಾಸಕರಿಗೆ ಕಮಿಷನ್ ನೀಡಬೇಕಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಶಾಸಕರು, ತಮಗೆ ಬೇಕಾದವರಿಗೆ ಟೆಂಡರ್ ಕೊಡಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಮಿಷನ್ ಕೊಟ್ಟರಷ್ಟೇ ಶಾಸಕರು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬರುತ್ತಾರೆ ಎಂದು ಆರ್.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆವಾರು ಬಾಕಿ ಬಿಲ್‍ಗಳ ವಿವರ
ಇಲಾಖೆ - ಬಿಲ್‍ಗಳ ಬಾಕಿ( ಕೋಟಿ ರೂ.ಗಳಲ್ಲಿ)
ಜಲಸಂಪನ್ಮೂಲ ಇಲಾಖೆ 14,000
ಲೋಕೋಪಯೋಗಿ ಇಲಾಖೆ 8,370
ಸಣ್ಣ ನೀರಾವರಿ 3,600
ಆರ್‍ಡಿಪಿಆರ್ 3,000
ವಸತಿ 2,600
ಜಿಬಿಎ 2,600
ಕಾರ್ಮಿಕ 2,000
ನಗರಾಭಿವೃದ್ಧಿ 1,800
ಒಟ್ಟು ಮೊತ್ತ 37,970
“ಲೋಕೋಪಯೋಗಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹೊರತುಪಡಿಸಿ ಬೇರೆ ಇಲಾಖೆಗಳು ಟೆಂಡರ್ ಮತ್ತು ಹಣ ಬಿಡುಗಡೆಯ ವಿಚಾರದಲ್ಲಿ ಪಾರದರ್ಶಕವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ 40 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಹೇಳುತ್ತಾರೆ. ಅವರಿಗೆ ಪತ್ರ ಬರೆದು ನಿರಂತರವಾಗಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಹಿಂದಿನ ಸಿಎಂ ಅವರು ಸಭೆ ಕರೆದಿರಲಿಲ್ಲ. ಈಗಿನ ಸಿಎಂ ಸಹ ಗುತ್ತಿಗೆದಾರರ ಜತೆ ಸಭೆ ಕರೆಯಲು ಹಿಂದೇಟು ಹಾಕುತ್ತಿದ್ದಾರೆ.”
- ಜಿ.ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಗುತ್ತಿಗೆದಾರರ ಸಂಘ.






