ಜಾತಿ ಜನಗಣತಿ ವರದಿಯನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಜನಾಂದೋಲನಾ: ಅಹಿಂದ ಎಚ್ಚರಿಕೆ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಎಚ್.ಕಾಂತರಾಜ್ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015(ಜಾತಿ ಜನಗಣತಿ)ವರದಿಯನ್ನು ಕರ್ನಾಟಕ ಸರಕಾರ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಜನಾಂದೋಲನ ನಡೆಸಲಾಗುವುದು ಎಂದು ‘ಅಹಿಂದ’ ಚಳುವಳಿ ಸಂಘಟಣೆ ತೀರ್ಮಾನಿಸಿದೆ.
ಶನಿವಾರ ಇಲ್ಲಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ‘ಅಹಿಂದ’ ಚಳುವಳಿ ಸಂಘಟಣೆಯ ರಾಜ್ಯ ಮುಖ್ಯ ಸಂಚಾಲಕ ಎಸ್.ಮೂರ್ತಿ ನೇತೃತ್ವದಲ್ಲಿ ನಡೆದ ರಾಜ್ಯವ್ಯಾಪಿ ಜಿಲ್ಲಾ ಘಟಕಗಳ ಕೇಡರ್ಗಳ ಸಭೆಯಲ್ಲಿ ಜಾತಿ ಜನಗಣತಿ ಜಾರಿ ಸೇರಿ ಕೆಲ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.
ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳ ಸಾಧಕರನ್ನು ಕರ್ನಾಟಕ ವಿಧಾನಪರಿಪತ್ಗೆ ನಾಮನಿರ್ದೇಶನ ಮಾಡುವ ಸಂಪ್ರದಾಯಗಳಿವೆ. ಈಗ ಅಂತಹ 2 ಶಾಸಕ ಸ್ಥಾನಗಳು ಖಾಲಿಯಿದ್ದು, ಜ.27ರಂದು ಮತ್ತೊಂದು ಸ್ಥಾನ ಖಾಲಿಯಾಗಲಿದೆ. ಆ ಶಾಸಕ ಸ್ಥಾನಗಳಿಗೆ ಸಂಗೀತ ನಿರ್ದೇಶಕ ಹಂಸಲೇಖ, ದಲಿತ ಸಾಹಿತಿ ದೇವನೂರು ಮಹಾದೇವರನ್ನು ನಾಮನಿರ್ದೇಶನ ಮಾಡಬೇಕು ಎಂದು ನಿರ್ಧರಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಗುತ್ತಿಗೆ ನೇಮಕಾತಿ ನೀತಿಗಳು ಭಾರತ ಸಂವಿಧಾನ ಅನುಚ್ಚೇದ 16ರ ಉದ್ಯೋಗ ಮೀಸಲಾತಿ ಆಶಯಗಳಿಗೆ ವಿರುದ್ಧವಾಗಿದೆ. ಇದರಿಂದ ರಾಜ್ಯದಲ್ಲಿನ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳಿಗೆ ಉದ್ಯೋಗ ಮೀಸಲಾತಿ ಹಕ್ಕುಗಳನ್ನು ಕಸಿದುಕೊಂಡಾಂತಾಗಿದೆ. ಈ ಸಮುದಾಯಗಳಲ್ಲಿನ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಗುತ್ತಿಗೆ ನೇಮಕಾತಿ ವ್ಯವಸ್ಥೆಗಳನ್ನು ಕೈಬಿಟ್ಟು, ನೇರ ನೇಮಕಾತಿ ವ್ಯವಸ್ಥೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒತ್ತಾಯಿಸಲು ಮತ್ತು ರಾಜ್ಯವ್ಯಾಪಿ ಜನಾಂದೋಲನಗಳನ್ನು ಮಾಡಲು ಸಭೆಯು ತೀರ್ಮಾನಿಸಿದೆ.
ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧೀನದಲ್ಲಿನ ಅಭಿವೃದ್ಧಿ ನಿಗಮಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳ ಸಂಬಂಧ, ಪ್ರತಿ ತಾಲ್ಲೂಕಿಗೆ ನಿಗದಿಪಡಿಸಿರುವ ಫಲಾನುಭವಿಗಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಳ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪಿಎಂವೈ-ಆರ್ ಯೋಜನೆಯಡಿ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಮತ್ತು ನಿವೇಶನವಿರುವ ಬಡವರಿಗೆ ಮನೆ ಕಟ್ಟಿಕೊಳ್ಳಲು ಕನಿಷ್ಟ 10 ಲಕ್ಷ ರೂ. ಸಹಾಯಧನ ನೀಡಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿನೊಳಗಿನ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ, ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಷ್ಟ್ರೀಯ ಜನಗಣತಿ ನಮೂನೆಗಳಲ್ಲಿ ಜಾತಿ ಮತ್ತು ಒಳಜಾತಿಗಳ ಕಾಲಂ ಅಳವಡಿಸಿ, ಜನಗಣತಿ ಜೊತೆಯಲ್ಲಿಯೇ ಜಾತಿಗಣತಿ ಮಾಡಬೇಕು ಎಂದು ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಜಂಟಿ ಸಂಚಾಲಕ ವೆಂಕಟೇಶ್ ಗೌಡ, ಸಂಚಾಲಕರಾದ ಅಶೋಕ್ ಕುಮಾರ್, ಸುರೇಂದ್ರ, ಜಗದೀಶ್, ಕೃಷ್ಣಕುಮಾರಿ, ತಾಜ್ ಬಾಷ, ನಿವೃತ್ತ ಅಧಿಕಾರಿ ಭೀಮಾಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







