ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಸ್ಥಳಗಳ ಬಳಕೆ ಸಲ್ಲದು: ಹೈಕೋರ್ಟ್

Photo credit: PTI
ಬೆಂಗಳೂರು: ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಸ್ಥಳಗಳನ್ನು ಬಳಸುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, ಕಳೆದ ಲೋಕಸಭೆ ಚುನಾವಣೆ ವೇಳೆ ದೇವಸ್ಥಾನವೊಂದರಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದಲ್ಲಿ ಕೆ.ಎಸ್. ಈಶ್ವರಪ್ಪ ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿ, ವಿಚಾರಣೆ ಮುಂದೂಡಿದೆ.
ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಆ ಸಂಬಂಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ರದ್ದು ಕೋರಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿ 9 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಲೀಲೇಶ್ ಕೃಷ್ಣ ಅವರು, ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಯಾವ ರಾಜಕೀಯ ಚಟುವಟಿಕೆ ನಡೆಸಲಾಗಿದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಧಾರ್ಮಿಕ ಸ್ಥಳಗಳ (ದುರ್ಬಳಕೆ) ತಡೆ ಕಾಯ್ದೆ ಅಡಿ ಅಪರಾಧವಾಗುವ ಯಾವುದೇ ಕೃತ್ಯ ನಡೆಸಿಲ್ಲ. 14 ಸಾಕ್ಷಿಗಳ ಪೈಕಿ 13 ಮಂದಿ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ. ಒಬ್ಬರು ಮಾತ್ರ ಪ್ರತ್ಯಕ್ಷದರ್ಶಿಯಾಗಿದ್ದಾರೆ ಎಂದರು.
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ದೇವಸ್ಥಾನದಲ್ಲಿ ಸಭೆ ನಡೆಸಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಆದ್ದರಿಂದ, ಧಾರ್ಮಿಕ ಸ್ಥಳಗಳ (ದುರ್ಬಳಕೆ) ತಡೆ ಕಾಯ್ದೆ ಅನ್ವಯಿಸಿರುವುದು ಸಮರ್ಥನೀಯ ಎಂದರು.
ಇದನ್ನು ಆಲಿಸಿದ ನ್ಯಾಯಪೀಠ, ಉಭಯ ಪಕ್ಷಕಾರರ ಪರ ವಕೀಲರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಪ್ರಕರಣದ ವಿಸ್ತೃತ ವಿಚಾರಣೆ ಅಗತ್ಯ ಎಂದು ಅಭಿಪ್ರಾಯಪಟ್ಟಿತಲ್ಲದೆ, ಅರ್ಜಿಯನ್ನು ಜೂನ್ 15ರ ನಂತರ ಪಟ್ಟಿ ಮಾಡಲು ರಿಜಿಸ್ಟ್ರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಕನಿಷ್ಠ ಪಕ್ಷ ದೇವಸ್ಥಾನದ ಅರ್ಚಕ ಮತ್ತು ಇನ್ನೊಬ್ಬ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆಗ ನ್ಯಾಯಪೀಠ, ರಾಜಕೀಯ ಕಾರಣಗಳಿಗೆ ನೀವು ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಲಾಗದು. ಇದಕ್ಕೆ ವಿರಾಮ ಇಡಬೇಕು ಎಂದು ಮೌಖಿಕವಾಗಿ ಕಿಡಿಕಾರಿತು.
ಪ್ರಕರಣವೇನು?
2024ರ ಲೋಕಸಭಾ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಶಿವಮೊಗ್ಗದ ಆದಿ ರಂಗನಾಥ ದೇವಾಲಯದಲ್ಲಿ ಈಶ್ವರಪ್ಪ ಮತ್ತು ಇತರರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಸಭೆ ನಡೆಸಿ ಚರ್ಚಿಸಿದ್ದರು. ಇದರ ಮಾಹಿತಿಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಈಶ್ವರಪ್ಪ ಸೇರಿ 9 ಮಂದಿಯ ವಿರುದ್ಧ ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯ್ದೆಯ ಸೆಕ್ಷನ್ಗಳಾದ 3, 6, ಮತ್ತು 7ರ ಅಡಿ ಪ್ರಕರಣ ದಾಖಲಿಸಲಾಗಿದೆ.






