ರೇಣುಕಾಸ್ವಾಮಿ ಕೊಲೆ ಪ್ರಕರಣ | ಪ್ರದೂಶ್ ಮಾಫಿ ಸಾಕ್ಷಿ ಪ್ರಶ್ನಿಸಿ ಸುಪ್ರೀಂಗೆ ಮೂರು ಪ್ರತ್ಯೇಕ ಮೇಲ್ಮನವಿ; ಶೀಘ್ರವೇ ವಿಚಾರಣೆ ಸಾಧ್ಯತೆ

ರೇಣುಕಾಸ್ವಾಮಿ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಪ್ರದೂಶ್ ರಾವ್ ಹೇಳಿಕೆಯನ್ನು ಮಾಫಿ ಸಾಕ್ಷಿಯಾಗಿ ದಾಖಲು ಮಾಡುತ್ತಿರುವುದನ್ನು ಪ್ರಶ್ನಿಸಿ ಮೂರು ಪ್ರತ್ಯೇಕ ಮೇಲ್ಮನವಿಗಳನ್ನ ದರ್ಶನ್ ಪರವಾಗಿ ಅವರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದು ಇದೇ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಕರಣದ 14 ನೇ ಆರೋಪಿ ಪ್ರದೂಶ್ ರಾವ್ ಮಾಫಿ ಸಾಕ್ಷಿಯಾಗಿದ್ದರು. ಇದನ್ನು ಪ್ರಶ್ನೆ ಮಾಡಿ ದರ್ಶನ್ ಪರ ವಕೀಲರು ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಎರಡೂ ಕಡೆ ಅರ್ಜಿ ಸಲ್ಲಿಸಿದ್ದರು ಆದರೆ ಕ್ರಮವಾಗಿ ಎರಡು ಕಡೆ ದರ್ಶನ್ ಅರ್ಜಿಯನ್ನು ವಜಾ ಮಾಡಲಾಗಿತ್ತು. ಈ ಹಿನ್ನಲೆ ನಿನ್ನೆಯಿಂದ ಮಾಫಿ ಸಾಕ್ಷಿ ಪ್ರದೂಶ್ ರಾವ್ ಹೇಳಿಕೆಯನ್ನ ವಿಚಾರಣಾ ನ್ಯಾಯಾಲಯ ದಾಖಲು ಮಾಡುತ್ತಿದೆ.
ಈ ಬೆಳವಣಿಗೆಯ ನಡುವೆಯೇ ಹೈಕೋರ್ಟ್ ಅದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ ನಲ್ಲಿ ಮೂರು ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಗಳು ಇದೇ ವಾರ ವಿಚಾರಣೆಗೆ ಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
►ಮುಂದುವರೆದ ಪ್ರದೂಶ್ ರಾವ್ ಮಾಫಿ ಸಾಕ್ಷಿ ದಾಖಲು; ನಾಳೆಯೂ ನಡೆಯಲಿದೆ ಸಾಕ್ಷ್ಯ ದಾಖಲು
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರಕರಣದ 14 ನೇ ಆರೋಪಿಯಾಗಿದ್ದು ಈಗ ಮಾಫಿ ಸಾಕ್ಷಿಯಾಗಿರುವ ಪ್ರದೂಶ್ ರಾವ್ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಸತತ ಎರಡನೇ ದಿನವೂ 59 ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಎಂ ಸಂಬ್ರಾಣಿ ನಡೆಸಿದರು. ಸದ್ಯ ಮಾಫಿ ಸಾಕ್ಷಿ ಹೇಳಿಕೆ ದಾಖಲು ಇನ್ನೂ ಮುಂದುವರೆದಿದ್ದು ನಾಳೆಯೂ ಮಾಫಿ ಸಾಕ್ಷಿ ದಾಖಲು ನಡೆಯಲಿದೆ.
ಇಂದು ಬೆಳಗ್ಗೆ ನ್ಯಾಯಾಲಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರದೂಶ್ ರಾವ್ ನನ್ನು ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಿದ್ದು ಪ್ರದೂಶ್ ರಾವ್ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಪ್ರದೂಶ್ ಹೇಳಿಕೆ ದಾಖಲು ಮಾಡುವ ವೇಳೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಜೈಲಿನಲ್ಲಿರುವ ಎಲ್ಲ ಆರೋಪಿಗಳು ವಿಡೀಯೋ ಕಾನ್ಪರೆನ್ಸ್ ನಲ್ಲಿ ಹಾಜರಿದ್ದರು.






