ರೇಣುಕಾಸ್ವಾಮಿ ಕೊಲೆ ಪ್ರಕರಣ; ಪ್ರದೂಷ್ ರಾವ್ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ರೇಣುಕಾಸ್ವಾಮಿ
ಬೆಂಗಳೂರು : ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್ ಎಸ್. ರಾವ್ ಗೆ ಮಧ್ಯಂತರ ಜಾಮೀನು ನೀಡಲು ನಗರದ 58ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.
ದಿವಂಗತ ತಂದೆಯ ಮೊದಲ ವರ್ಷದ ಶ್ರಾದ್ಧ ವಿಧಿವಿಧಾನಗಳನ್ನು ನೆರವೇರಿಸಲು 24 ದಿನಗಳ ಕಾಲ ಮಧ್ಯಂತರ ಜಾಮೀನು ಕೋರಿ ಪ್ರದೋಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಶುಕ್ರವಾರ ವಜಾಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಪ್ರದೂಷ್ ಮಾಫಿ ಸಾಕ್ಷಿಯಾಗಿದ್ದಾರೆ. ಪ್ರಕರಣದ ವಿಚಾರಣೆಯು ಮಾಫಿ ಸಾಕ್ಷಿಯನ್ನು (ಅಪ್ರೂವರ್) ವಶದಲ್ಲಿರಿಸುವ ಜವಾಬ್ದಾರಿಯು ನ್ಯಾಯಾಲಯದ ಮೇಲಿರುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಜತೆಗೆ, ಮಾಫಿ ಸಾಕ್ಷಿಗೆ ಜಾಮೀನು ನೀಡುವ ಅಧಿಕಾರ ವ್ಯಾಪ್ತಿ ಹೈಕೋರ್ಟ್ಗೆ ಮಾತ್ರ ಇದೆ. ವಿಚಾರಣಾ ಕೈದಿಯು ಸಂವಿಧಾನದ ಪರಿಚ್ಛೇದ 25ರ ಅಡಿ ಬಿಡುಗಡೆಯಾಗುವ ಸಾಂವಿಧಾನಿಕ ಹಕ್ಕು ಹೊಂದಿದ್ದರೂ, ಆತನ ಮಧ್ಯಂತರ ಜಾಮೀನು ಕೋರಿಕೆಯನ್ನು ಮನ್ನಿಸುವ ಅಧಿಕಾರ ವ್ಯಾಪ್ತಿ ಸೆಷನ್ಸ್ ಅಥವಾ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಲಭ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ಮಾಫಿ ಸಾಕ್ಷಿಯನ್ನು ಬಿಡುಗಡೆ ಮಾಡುವುದರಿಂದ, ಆತನ ಹಿಂದಿನ ಸಹಚರರ ದ್ವೇಷದಿಂದ ಉಂಟಾಗುವ ಅಪಾಯಗಳಿಗೆ ಆತ ತುತ್ತಾಗಬಹುದು. ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿರುವಾಗ ಅವರಿಗೆ ಒದಗಿಸಬಹುದಾದ ರಕ್ಷಣೆಯನ್ನು ಅವರು ಬಿಡುಗಡೆಗೊಂಡರೆ ಅಷ್ಟೇ ಪರಿಣಾಮಕಾರಿಯಾಗಿ ಒದಗಿಸುವುದು ಸಾಧ್ಯವಾಗದಿರಬಹುದು. ದಿವಂಗತ ತಂದೆಯವರ ಮೊದಲ ವರ್ಷದ ಶ್ರಾದ್ಧ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿರುವುದು ನಿಸ್ಸಂದೇಹವಾಗಿ ವೈಯಕ್ತಿಕ ಮತ್ತು ಭಾವನಾತ್ಮಕ ವಿಷಯವಾಗಿದ್ದರೂ, ಈ ಪರಿಹಾರವನ್ನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಕೇವಲ ಇಂತಹ ಸನ್ನಿವೇಶವನ್ನು ಆಧಾರವಾಗಿಟ್ಟುಕೊಂಡು ಈ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಚಲಾಯಿಸಲಾಗದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣವನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಪ್ರದೂಷ್ ಅವರ ಸಾಕ್ಷ್ಯ ಹೇಳಿಕೆಯನ್ನು (ಚೀಫ್-ಎಕ್ಸಾಮಿನೇಷನ್) ಈ ನ್ಯಾಯಾಲಯ ದಾಖಲಿಸಿಕೊಂಡಿದೆ. ಆದರೆ, ಆತನ ಪಾಟಿ ಸವಾಲು ಪ್ರಕ್ರಿಯೆ ಬಾಕಿಯಿದೆ. ವಿಚಾರಣೆ ಬಾಕಿ ಇರುವ ಜತೆಗೆ, ಅರ್ಜಿದಾರರ ಸಾಕ್ಷ್ಯವೂ ಇನ್ನೂ ಪೂರ್ಣಗೊಂಡಿಲ್ಲ. ಮಾಫಿ ಸಾಕ್ಷಿಯಾಗುವ ಮೂಲಕ ಅಪರಾಧದಲ್ಲಿ ತನ್ನ ಹಿಂದಿನ ಸಹಚರರು/ಸ್ನೇಹಿತರ ಕೃತ್ಯವನ್ನು ಬಯಲಿಗೆಳೆಯಲು ನಿರ್ಧರಿಸಿದ್ದಾರೆ. ಅವರನ್ನು ಸಹಚರರಿಂದ ಉಂಟಾಗಬಹುದಾದ ಆಕ್ರೋಶ, ದ್ವೇಷ ಮತ್ತು ಅಸಮಾಧಾನದಿಂದ ರಕ್ಷಿಸಬೇಕಿದೆ. ಪ್ರಾಸಿಕ್ಯೂಷನ್ಗೆ ಸಹಾಯ ಮಾಡಲು ಒಪ್ಪಿಕೊಂಡ ನಂತರ, ತನ್ನ ಹಿಂದಿನ ಸಹಚರರನ್ನು ರಕ್ಷಿಸುವ ಪ್ರಲೋಭನೆಗೆ ಮಾಫಿ ಸಾಕ್ಷಿ ಒಳಗಾಗುವ ಸಾಧ್ಯತೆಯಿದ್ದು, ಅದನ್ನು ತಡೆಯುವ ಉದ್ದೇಶವನ್ನೂ ನ್ಯಾಯಾಲಯ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಿದೆ.






