ಮೀಸಲಾತಿ ಭಿಕ್ಷೆಯಲ್ಲ ಅದು ಶೋಷಿತರ ಹಕ್ಕು: ಸಿದ್ದರಾಮಯ್ಯ

ಬೆಂಗಳೂರು: ‘ಅಸಮಾನತೆ ಇರುವ ಸಮಾಜದಲ್ಲಿ ಮೀಸಲಾತಿ ಅನಿವಾರ್ಯ. ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನತೆ ಬರಬೇಕು, ಸಮಸಮಾಜ ನಿರ್ಮಾಣ ಆಗಬೇಕು. ಎಲ್ಲಿಯವರೆಗೂ ಅಸಮಾನತೆ ಮುಂದುವರೆಯುತ್ತದೋ, ಅಲ್ಲಿಯವರೆಗೂ ಮೀಸಲಾತಿ ಸೌಲಭ್ಯ ಇರಲೇಬೇಕು. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ, ಅದು ಶೋಷಿತರ ಹಕ್ಕು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿಭವನದಲ್ಲಿ ಲೋಹಿಯಾ ಸಮತಾ ವಿದ್ಯಾಲಯ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಅಹಿಂದ ಕರ್ನಾಟಕ ವತಿಯಿಂದ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ದಿನಾಚರಣೆ: ಮಂಡಲ್ ವರದಿ ಜಾರಿಯ 36ನೇ ವಾರ್ಷಿಕೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲಿಯ ವರೆಗೂ ಅಸಮಾನತೆ ಮುಂದುವರೆಯುತ್ತದೋ ಅಲ್ಲಿಯವರೆಗೂ ಜಾತಿ ವ್ಯವಸ್ಥೆಯೂ ಹೋಗುವುದಿಲ್ಲ, ಸಮಸಮಾಜ ನಿರ್ಮಾಣವೂ ಆಗುವುದಿಲ್ಲ. ಅದಕ್ಕಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಗಲೇಬೇಕು ಎಂದರು.
ಶೋಷಿತ ವರ್ಗದವರು ಯಾರು ಮಂಡಲ್ ಕಮಿಷನ್ ವರದಿ ಜಾರಿಯಾಗಬೇಕು ಎಂದು ಹೋರಾಟ ಮಾಡಿದವರಲ್ಲ. ಅದಕ್ಕೆ ಬೇರೆ ಏನೇ ಕಾರಣಗಳಿರಬಹುದು. ಈಗ ಎಲ್ಲರಿಗೂ ಶಿಕ್ಷಣ ಸಿಕ್ಕಿದೆ, ಸಂಘಟನೆ ಆಗಿದೆ. ಆದುದರಿಂದ ಇನ್ನು ಮುಂದೆ ಸುಮ್ಮನೆ ಕೂರಬಾರದು. ಮೂರು ವರ್ಷಗಳಿಂದಲೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ವಿರೋಧ ಮಾಡುವರು ಇದ್ದಾರೆ. ಆದುದರಿಂದಲೇ ಯೋಚನೆ ಮಾಡಿ ಎಲ್ಲ ಜಾತಿ ಬಡವರಿಗೂ ಅನ್ನಭಾಗ್ಯ ಮಾಡಿದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮಂಡಲ್ ಕಮಿಷನ್ ವರದಿ ಜಾರಿಯಾದಾಗ ಯಾರೆಲ್ಲ ವರದಿಯಿಂದ ಅನುಕೂಲ ಪಡೆದುಕೊಳ್ಳುತ್ತಾರೋ, ಅವರೆಲ್ಲರೂ ಅದನ್ನು ವಿರೋಧಿಸುತ್ತಿದ್ದರು. ಅಷ್ಟೇ ಅಲ್ಲದೇ, ಹಿಂದುಳಿದ ಹುಡುಗರನ್ನು ದಾರಿ ತಪ್ಪಿಸಿಬಿಟ್ಟಿದ್ದರು. ನಾವು ಎಲ್ಲಿಯವರೆಗೂ ಹಿಂದುಳಿದ ಹುಡುಗರನ್ನು ಪ್ರಚೋದನೆಮಾಡಿ ಎತ್ತಿಕಟ್ಟುವ ಕುತಂತ್ರವನ್ನು ಅರ್ಥ ಮಾಡಿಕೊಳ್ಳುವುದಿಲ್ಲೋ, ಅಲ್ಲಿಯವರೆಗೂ ಸಮಸಮಾಜ ನಿರ್ಮಾಣ ಮಾಡಲು ಆಗುವುದಿಲ್ಲ, ನಾವು ಮುಂದುವರೆಯಲೂ ಆಗುವುದಿಲ್ಲ. ನಾವು ಸಂಘಟಿತರಾಗಿ ಹೋರಾಟ ಮಾಡದೇ ಹೋದರೆ, ನ್ಯಾಯ ಪಡೆದುಕೊಳ್ಳೋಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ಮೀಸಲಾತಿ ನಮ್ಮ ಜನ್ಮ ಸಿದ್ದ ಸಂವಿಧಾನ ಬದ್ದ ಹಕ್ಕು. ಇದನ್ನು ಪಡೆದುಕೊಳ್ಳುವ ಕೆಲಸ ಮಾಡಬೇಕು. ಯಾವ ಪಕ್ಷ ಸಾಮಾಜಿಕ ನ್ಯಾಯ, ಸಂವಿಧಾನದ ಪರವಾಗಿದಿಯೋ ಅಲ್ಲಿ ನಾವಿರಬೇಕು. ಇದೆಲ್ಲವನ್ನೂ ಇನ್ನು ಮುಂದಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕು. ಮಂಡಲ್ ಕಮಿಷನ್ ವರದಿ ಪ್ರಕಾರ ಶೇ.52ರಷ್ಟು ಜನ ಹಿಂದುಳಿದ ಸಮುದಾಯದವರೇ ಇದ್ದಾರೆ. ಇವರಿಗೆ ಕೇವಲ ಶೇ.27ರಷ್ಟು ಮೀಸಲಾತಿ ಇದೆ. ಇದು ಇನ್ನು ಹೆಚ್ಚಾಗಬೇಕೆಂದು ಹೋರಾಟ ಮಾಡಬೇಕು. ರಾಜಕೀಯ ಕ್ಷೇತ್ರ, ಹೈಕೋರ್ಟ್, ಸುಪ್ರೀಂ ಕೋರ್ಟ್‍ನಲ್ಲೂ ಮೀಸಲಾತಿ ಇರಬೇಕು. ಸಂಘಟನೆ ಆದರೆ ಶಕ್ತಿ ಬರುತ್ತದೆ. ಶಕ್ತಿ ಇದ್ದರೆ ಧ್ವನಿ ಇರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ, ಸಂವಿಧಾನ ತಜ್ಞ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಸಂಸದ ನಾರಾಯಣಸ್ವಾಮಿ, ಮುಖಂಡ ಅನಂತ ನಾಯ್ಕ್, ಲೋಹಿಯಾ ಸಮತಾ ವಿದ್ಯಾಲಯದ ಧರ್ಮದರ್ಶಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.






