ಎಲ್ಲಾ ನ್ಯಾಯಾಲಯಗಳಲ್ಲೂ ಮೀಸಲಾತಿ ಅನುಷ್ಟಾನವಾಗಬೇಕು: ಸಿದ್ದರಾಮಯ್ಯ
"ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು"

ಬೆಂಗಳೂರು: ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವರಿಗೆ (ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ನೀಡಲಾಗಿದ್ದು, ಇದರಿಂದ ಮೀಸಲಾತಿ ಪ್ರಮಾಣ ಶೇ.60ರಷ್ಟಾಗಿದೆ. ಆದರೆ ಮೀಸಲಾತಿ ಮಿತಿ ಶೇ.50ಕ್ಕಿಂತ ಹೆಚ್ಚಾಗಬಾರದು ಎಂದು ಕೋರ್ಟ್ ಆದೇಶವಿದೆ. ಹೀಗಾಗಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೇರಿ ಎಲ್ಲ ನ್ಯಾಯಾಲಯಗಳಲ್ಲೂ ಮೀಸಲಾತಿ ಅನುಷ್ಟಾನವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಂಗಳವಾರ ಇಲ್ಲಿನ ಗಾಂಧಿ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ‘ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ’ ಉದ್ಘಾಟಿಸಿ ಮಾತನಾಡಿದ ಅವರು, 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿಯ ಒಟ್ಟು ಮಿತಿಯು ಶೇ.50ನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‍ನ 9 ನ್ಯಾಯಾಧೀಶರ ಪೀಠವು ತೀರ್ಪು ನೀಡಿತು. ಆದರೆ ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಅಲ್ಲಿಗೆ ಮೀಸಲಾತಿ ಪ್ರಮಾಣ ಶೇ.60ರಷ್ಟಾಗಿದೆ ಎಂದರು.
ಸುಪ್ರೀಂ ಕೋರ್ಟ್ ಒಳಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ಒಳ ಮೀಸಲಾತಿ ಪರವಾಗಿದೆ. ಮೀಸಲಾತಿಗೆ ಯಾವತ್ತೂ ಭಿನ್ನಾಭಿಪ್ರಾಯಗಳು ಬರಬಾರದು. ಆದರೆ ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರುದ್ಧವಾಗಿರುವ ಜನರ ಜೊತೆಗೆ ಸೇರಿಕೊಳ್ಳುತ್ತಾರೆ. ಅದು ಆಗಬಾರದು. ಯಾವ ಪಕ್ಷ ಮೀಸಲಾತಿಗೆ ವಿರೋಧ ಇದೆಯೋ ಅವರ ಪರವಾಗಿ ನಿಲ್ಲುವುದು, ಆ ಪಕ್ಷದ ಸಿದ್ಧಾಂತಕ್ಕೆ ಜೈ ಅನ್ನುವುದು, ಸ್ವಾರ್ಥವಲ್ಲವೇ ಎಂದು ಅವರು ಪ್ರಶ್ನಿಸಿದರು.
ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು. ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ. ಜಾತಿ ವ್ಯವಸ್ಥೆ ಪರಿಣಾಮವಾಗಿ ಶೋಷಣೆಗೆ ಒಳಗಾದವರಿಗೆ, ಅವಕಾಶ ವಂಚಿತರಿಗೆ ಮೀಸಲಾತಿ ಸಿಗಲೇಬೇಕು. ನಾವ್ಯಾರು ದಡ್ಡರಲ್ಲ, ಅವಕಾಶ ವಂಚಿತರು. ನಮ್ಮ ಬುದ್ಧಿವಂತಿಕೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಅವಕಾಶವನ್ನು ಮೀಸಲಾತಿ ವ್ಯವಸ್ಥೆ ನೀಡುತ್ತಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು. ಒಳ ಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಬಂದ ಮೇಲೆ ಎಲ್ಲ ಕಡೆಯೂ ಇದಕ್ಕೆ ಚಾಲನೆ ಸಿಕ್ಕಿದೆ. ನಮ್ಮ ಸರಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತದೆ ಎಂದು ಹೇಳಿದ್ದೆ. ಅದರಂತೆ, ನಾಗಮೋಹನ್‍ದಾಸ್ ಸಮಿತಿ ಮಾಡಿ, ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳನ್ನು ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಿದೆವು ಎಂದು ವಿವರಿಸಿದರು.
ಎಲ್ಲಿಯವರೆಗೆ ಸಮಾನ ಅವಕಾಶಗಳು ಸಿಗುವುದಿಲ್ಲ, ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ. ಈ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ಬರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಬುದ್ಧನ ಕಾಲದಿಂದಲೂ ಇಲ್ಲಿ ಜಾತಿ ವ್ಯವಸ್ಥೆ ಇದೆ, ಅದರ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿದೆ, ಇದು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೂ ಇನ್ನೂ ಜಾತಿ ಜೀವಂತವಿದೆ ಎನ್ನುವುದು ವಿಪರ್ಯಾಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎನ್ನುವ ತಮ್ಮ ನಿರ್ಧಾರವನ್ನು ಅವರು ಪುನರುಚ್ಛರಿಸಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಬಸವರಾಜ ಕೌತಾಳ, ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.






