‘ವಿಬಿ: ಜಿ ರಾಮ್ ಜಿ ಕಾಯ್ದೆ ಸಂಪೂರ್ಣ ರದ್ದುಗೊಳಿಸಿ’; ಮನರೇಗಾ ಮರು ಜಾರಿಗೊಳಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ

ಬೆಂಗಳೂರು : ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್(ಗ್ರಾಮೀಣ) (ವಿಬಿ:ಜಿ ರಾಮ್ ಜಿ) ಕಾಯ್ದೆಯನ್ನು ಸಂಪೂರ್ಣ ರದ್ದುಗೊಳಿಸಿ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಪರವಾಗಿ ನಿರ್ಣಯ ಮಂಡಿಸಿದರು.
ಹಿಂದೆ ಜಾರಿಯಲ್ಲಿದ್ದ ಮನರೇಗಾ ಅಡಿಯಲ್ಲಿ ಎಲ್ಲ ವರ್ಗದ ಜನರಿಗೆ ಕೆಲಸವಿತ್ತು. ಮನರೇಗಾ ಬರುವ ಮುನ್ನ ಕೆಲಸ ಹುಡುಕಿಕೊಂಡು ಜನ ವಲಸೆ ಹೋಗುತ್ತಿದ್ದರು. ಮನರೇಗಾ ಅಡಿಯಲ್ಲಿ ಬೇಡಿಕೆಗೆ ಅನುಸಾರವಾಗಿ ಕೆಲಸ ಒದಗಿಸಲಾಗುತ್ತಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆಹಾರ ಭದ್ರತೆ, ಶಿಕ್ಷಣ, ಮಾಹಿತಿ ಹಕ್ಕು, ಅರಣ್ಯ ವಾಸಿಗಳಿಗೆ ಹಕ್ಕು ನೀಡುವ ಕಾಯ್ದೆಗಳನ್ನು ತಂದರು. ಇದು ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸಿತ್ತು ಎಂದು ಮುಖ್ಯಮಂತ್ರಿ ಹೇಳಿದರು.
ವಿಬಿ: ಜಿ ರಾಮ್ ಜಿ ಪ್ರಕಾರ ಕೇಂದ್ರ ಸರಕಾರ ಕೆಲಸ ಎಲ್ಲಿ ನೀಡಬೇಕೆಂದು ತೀರ್ಮಾನಿಸುತ್ತದೆ. ಮನರೇಗಾದಲ್ಲಿ ಸಂವಿಧಾನದ 73/74 ತಿದ್ದುಪಡಿಯ ಪ್ರಕಾರ ವಿಕೇಂದ್ರೀಕರಣದಡಿ ಗ್ರಾಮ ಸಭೆಯಲ್ಲಿ ಎಲ್ಲಿ ಕೆಲಸವಾಗಬೇಕೆಂದು ತೀರ್ಮಾನವಾಗುತ್ತಿತ್ತು. ಈಗ ಅದಕ್ಕೆ ತಿಲಾಂಜಲಿ ಇಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ ಶೇ.51ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಮನರೇಗಾ ಇಲ್ಲದೇ ಹೋಗಿದ್ದರೆ ಕೋವಿಡ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಪರದಾಡಬೇಕಿತ್ತು. ಈಗ ಗ್ರಾಮ ಸಭೆಯೂ ಇಲ್ಲ, ಪಂಚಾಯತಿ ಪ್ರಕಾರ ತೀರ್ಮಾನವು ಆಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ಉದ್ಯೋಗಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ ಎಂದು ಅವರು ದೂರಿದರು.
ಮನರೇಗಾ ಪ್ರಕಾರ ವರ್ಷದಲ್ಲಿ 100 ದಿನ ಉದ್ಯೋಗ ನೀಡಬೇಕಿತ್ತು. ಕೆಲಸ ಇಲ್ಲದಿದ್ದರೆ ಕೂಲಿ ನೀಡಬೇಕಿತ್ತು. ಆದರೆ, ಈಗ ವರ್ಷದಲ್ಲಿ 60 ದಿನ ಕೃಷಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೆಲಸ ಇಲ್ಲದಂತಾಗಿದೆ. ಮನರೇಗಾದಲ್ಲಿ ಕೃಷಿ ಚಟುವಟಿಕೆಗಳಿದ್ದಾಗಲೂ ಕೆಲಸ ಮಾಡಬಹುದಾಗಿತ್ತು. ಗುತ್ತಿಗೆದಾರರಿಗೆ ನಿಷೇಧವಿತ್ತು. ಈಗ ಗುತ್ತಿಗೆದಾರರಿಗೆ ಅವಕಾಶ ನೀಡಿದ್ದು, ಕೂಲಿ ಕಾರ್ಮಿಕರು ಸೇತುವೆ, ಹೆದ್ದಾರಿ, ಮುಂತಾದ ದೊಡ್ಡ ಕೆಲಸಗಳಿಗೆ ಹೋಗುವಂತಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಪಂಚಾಯತಿಗಳಿಗೆ ಕೊಟ್ಟಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಮನರೇಗಾ ರದ್ದು ಮಾಡಿ ತಂದಿರುವ ವಿಬಿ: ಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳೆಂದರೆ, ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿಗಳ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಈ ಕಾಯ್ದೆಯು ಗ್ರಾಮೀಣಾಭಿವೃದ್ಧಿಗೆ ಮತ್ತು ಗ್ರಾಮೀಣ ಬದುಕಿಗೆ ಮಾರಕವಾಗಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.
ವಿಜಿ ಜಿ ರಾಮ್ ಜಿ ಕಾಯ್ದೆಯ ಪರಿಚ್ಛೇದ 5 ಕಲಂ (1) ಪ್ರಕಾರ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ ಬಜೆಟ್ ಮಾಡಿದರೆ ಮಾತ್ರ ಕೆಲಸ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರರ ಕೆಲಸ ಕಿತ್ತುಕೊಂಡಂತಾಗಿದೆ. 125 ದಿನ ಕೊಡುವುದಾಗಿ ಹೇಳಲಾಗಿದೆ. ಆದರೆ, ಮನರೇಗಾದಲ್ಲಿ ಶೇ.90(ಕೇಂದ್ರ):ಶೇ.10(ರಾಜ್ಯ)ರಷ್ಟು ಇದ್ದ ಅನುದಾನದ ಅನುಪಾತವನ್ನು ಕ್ರಮವಾಗಿ ಶೇ.60:40ಕ್ಕೆ ಇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಮನರೇಗಾ ಅಡಿ ಪ್ರತಿ ಪಂಚಾಯತಿಗೆ ಸರಾಸರಿ ಕನಿಷ್ಠ 1 ಕೋಟಿ ರೂ.ವರೆಗೂ ಕೆಲಸ ನೀಡಬಹುದಾಗಿತ್ತು. ಈಗ ಅದಕ್ಕೆ ಅವಕಾಶವಿಲ್ಲ ಏಕೆಂದರೆ ಅನೇಕ ರಾಜ್ಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಕೇಂದ್ರ ಸರಕಾರ ರಾಜ್ಯಗಳಿಗೆ ಕೊಡಬೇಕಾದ ಅನುದಾನ ಕೊಡುವುದಿಲ್ಲ. ಹಣಕಾಸು ಆಯೋಗ ಶಿಫಾರಸು ಮಾಡಿದ ಅನುದಾನವನ್ನೂ ಬಿಡುಗಡೆ ಮಾಡುವುದಿಲ್ಲ. 15ನೆ ಹಣಕಾಸು ಆಯೋಗದ ವತಿಯಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಂದಿನವರೆಗೂ ಅನುದಾನ ಕೊಟ್ಟಿಲ್ಲ. ಇದಕ್ಕೆ ಯಾವ ಬಳಕೆ ಪ್ರಮಾಣ ಪತ್ರವನ್ನು ನೀಡಬೇಕು? ಪ್ರತಿ ಗ್ರಾಮವೂ ಯೋಜನೆಯನ್ನು ಜಾರಿ ಮಾಡಬಹುದಾಗಿತ್ತು. ಈಗ ವರ್ಷದ 10 ತಿಂಗಳು ಮಾತ್ರ ಕೆಲಸ ಮಾಡಬಹುದು. ಕೂಲಿಯ ಮೊತ್ತವನ್ನು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಕೊಡಲಾಗುತ್ತಿತ್ತು. ಕೂಲಿಯನ್ನು ಬೆಲೆಯೇರಿಕೆಗೆ ಸರಿದೂಗಿಸಲಾಗುತ್ತಿತ್ತು. ಈಗಿನ ಕಾಯ್ದೆ ಪ್ರಕಾರ ಕೂಲಿಗೆ ಯಾವುದೇ ಖಾತ್ರಿ ಇಲ್ಲ ಎಂದು ಅವರು ಹೇಳಿದರು.
ಕೂಲಿಯನ್ನು ಕೇಂದ್ರ ಸರಕಾರವೆ ನೀಡುತ್ತಿತ್ತು. ಈಗ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರಷ್ಟು ಅನುದಾನ ನೀಡಬೇಕು ಎಂದು ತಿಳಿಸಿದೆ. ಈಗ ಅನೇಕ ರಾಜ್ಯಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ. ಮನರೇಗಾ ದಲ್ಲಿ ಆಸ್ತಿ ಸೃಷ್ಟಿಸುವ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕಾಯ್ದೆ ಅಡಿ ಸರಬರಾಜು ಆಧಾರಿತ ಕೆಲಸಗಳನ್ನು ತೆಗೆದುಕೊಳ್ಳಬೇಕಿದೆ. ವಿಬಿ ಜಿ ರಾಮ್ ಜಿ ಜಾರಿಗೆ ತಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ಈ ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯಗಳೊಂದಿಗೆ ಚರ್ಚೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೇಡಿಕೆಗಳು: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು, ಗ್ರಾಮ ಸಭೆಗಳು, ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಮುಖ್ಯಮಂತ್ರಿ ಹೇಳಿದರು.
ಆದುದರಿಂದ, ವಿಬಿ ಜಿ ರಾಮ್ ಜಿ ಕಾಯ್ದೆ ಸಂಪೂರ್ಣ ರದ್ದು ಮಾಡಿ, ಮನರೇಗಾ ಪುನರ್ ಜಾರಿಗೆ ತರುವ ನಿಟ್ಟಿನಲ್ಲಿ ಈ ಸದನ ನಿರ್ಣಯ ಅಂಗೀಕರಿಸಿ, ಕೇಂದ್ರ ಸರಕಾರ ಹಾಗೂ ರಾಷ್ಟ್ರಪತಿಗೆ ಕಳುಹಿಸಿಕೊಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.






