ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.4: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ: ಜಿ ರಾಮ್ ಜಿ’ ಕಾಯ್ದೆಯನ್ನು ವಾಪಸ್ ಪಡೆದು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಅಧಿಕೃತ ನಿರ್ಣಯವನ್ನು ಪ್ರತಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗದ ನಡುವೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಈ ನಿರ್ಣಯದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, 20 ವರ್ಷಗಳ ಹಿಂದೆಯೆ ಯುಪಿಎ ಸರಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮೂಲಕ ಜನರಿಗೆ ಉದ್ಯೋಗದ ಹಕ್ಕು, ಗ್ಯಾರಂಟಿಯನ್ನು ನೀಡಿತ್ತು ಎಂದರು.
ಈ ಯೋಜನೆಯಡಿ ಉದ್ಯೋಗ ಶ್ರೀಸಾಮಾನ್ಯನ ಹಕ್ಕು, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆ, ಗ್ರಾಮ ಪಂಚಾಯಿತಿಗಳನ್ನು ಬಲವರ್ಧನೆ ಮಾಡುವ ಉದ್ದೇಶವಿತ್ತು. ಸಮಾಜದ ಎಲ್ಲ ವರ್ಗಗಳಿಗೆ ಘನತೆಯ ಗ್ಯಾರಂಟಿ ಈ ಯೋಜನೆ ನೀಡಿತ್ತು. ಈ ಯೋಜನೆ ವಿಶ್ವದ ಅತೀ ದೊಡ್ಡ ಹಕ್ಕು ಆಧಾರಿತ ಉದ್ಯೋಗ ಯೋಜನೆಯಾಗಿದೆ ಎಂದು ಹೇಳಿದರು.
ಸಂಕಷ್ಟದ ಸಮಯದಲ್ಲಿ ಬಡ ಕುಟುಂಬಗಳು ಹಸಿವು, ಬಲವಂತದ ವಲಸೆ, ಸಾಲದ ಸುಳಿಗೆ ಸಿಲುಕಬಾರದು, ಅವರ ಮನೆಯ ಬಳಿಯೆ ಘನತೆ ಹಾಗೂ ಕನಿಷ್ಟ ವೇತನದ ಮೂಲಕ ಉದ್ಯೋಗ ನೀಡುವ ಯೋಜನೆಯನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾರಿಗೆ ತಂದಿದ್ದರು. 20 ವರ್ಷಗಳಲ್ಲಿ ದೇಶದಲ್ಲಿ 4,420 ಕೋಟಿ ಮಾನವ ದಿನ ಸೃಷ್ಟಿ, 16 ಕೋಟಿ ಉದ್ಯೋಗ ಕಾರ್ಡ್ ವಿತರಣೆ, 10 ಕೋಟಿ ಗ್ರಾಮೀಣ ಆಸ್ತಿ ಸೃಜನೆ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಜ್ಯದಲ್ಲಿ 183 ಕೋಟಿ ಮಾನವ ದಿನಗಳು, 71 ಲಕ್ಷ ಉದ್ಯೋಗ ಕಾರ್ಡ್ಗಳಿವೆ, 84 ಲಕ್ಷ ಗ್ರಾಮೀಣ ಆಸ್ತಿ ಸೃಜನೆ ಮಾಡಿದ್ದೇವೆ. ಈ ಉದ್ಯೋಗ ಖಾತರಿ ಯೋಜನೆ ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಚರ್ಚೆಯಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಸರಕಾರವು ಈ ಯೋಜನೆಯು ಗ್ರಾಮೀಣ ಪ್ರದೇಶದ ಶೇ.58.1ರಷ್ಟು ಮಹಿಳೆಯರು ಆರ್ಥಿಕ ಸಶಕ್ತರಾಗಿದ್ದಾರೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆಯಾಗಿದೆ, ಪಾರದರ್ಶಕವಾಗಿ ನಡೆಯುತ್ತಿದೆ, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಯಾಗಿದೆ, ಗ್ರಾ.ಪಂ.ಗಳ ಬಲವರ್ಧನೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ ಎಂದು ಉಲ್ಲೇಖಿಸಿದರು.
ನಾಥೂರಾಮ್ ಗೋಡ್ಸೆ ಹೆಸರು ಇಟ್ಟುಕೊಳ್ಳಲಿ: ಈ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ನಾಥೂರಾಮ್ ಗೋಡ್ಸೆ ಕಾಯ್ದೆ ಎಂದು ಇಟ್ಟುಕೊಳ್ಳಲಿ. ಆದರೆ, ಜನರಿಗೆ ಎರಡು ಹೊತ್ತು ಊಟ ಕೊಡಿ, ಅವರಿಗೆ ಕೆಲಸ ಕೊಡಿ. ನಾವು ಭೀಕ್ಷೆ ಕೇಳುತ್ತಿಲ್ಲ. ಜನರ ಹಕ್ಕು ಕೇಳುತ್ತಿದ್ದೇವೆ. ನಮ್ಮ ಹಣ ಖರ್ಚು ಮಾಡಲು ಕೇಂದ್ರದ ಅನುಮತಿ ಪಡೆಯಬೇಕು. ಗ್ರಾಮ ಸಭೆಗಳಿಗೆ ಅಧಿಕಾರವಿಲ್ಲದಂತಾಗುತ್ತದೆ. ಕೇಂದ್ರ ಅಧಿಸೂಚಿಸುವ ಕಡೆ ಕೆಲಸ ಮಾಡಬೇಕು. ಮನರೇಗಾದಲ್ಲಿ 365 ದಿನ ಕೆಲಸ ಕೇಳಬಹುದಿತು. ಈ ಕಾಯ್ದೆಯಡಿ 60 ದಿನ ನಿಷೇಧ ಹೇರಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರಕಾರ ಈ ಕಾಯ್ದೆಯಡಿ 3.38 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಹೇಳಿದೆ. ಇದರಲ್ಲಿ 2.30 ಲಕ್ಷ ಕೋಟಿ ರೂ.ಕೇಂದ್ರದ ಪಾಲು, ಉಳಿದ ಮೊತ್ತ ರಾಜ್ಯ ಸರಕಾರದ ಪಾಲು. ಆದರೆ, 2.30 ಲಕ್ಷ ಕೋಟಿ ರೂ.ಗಳಲ್ಲಿ ಇವರು ಇಟ್ಟಿರುವ ಹಣ 95 ಸಾವಿರ ಕೋಟಿ ರೂ.ಮಾತ್ರ. ಇದರಲ್ಲಿ 125 ದಿನ ಕೆಲಸ ಕೊಡಲು ಆಗುತ್ತದೆಯೇ? ಇದೊಂದು ಬೋಗಸ್ ಯೋಜನೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕೃಷಿ ಕಾಯ್ದೆಗಳನ್ನು ಮೋದಿ ಸರಕಾರ ಯಾವ ರೀತಿ ಹಿಂಪಡೆಯಿತೋ, ಅದೇ ರೀತಿ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಈ ಕಾಯ್ದೆಯನ್ನು ಹಿಂಪಡೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ನಾವು ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಆ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಂಡಿಸಿದ ನಿರ್ಣಯವನ್ನು ಅಂಗೀಕರಿಸಬೇಕೆಂದು ಕೋರಿದರು. ಸ್ಪೀಕರ್ ಯು.ಟಿ.ಖಾದರ್ ನಿರ್ಣಯವನ್ನು ಸಭೆಯ ಮತಕ್ಕೆ ಹಾಕಿ ಧ್ವನಿಮತದ ಮೂಲಕ ಅಂಗೀಕರಿಸಿದರು.






