ತಾಂತ್ರಿಕ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ-2.0 ತಂತ್ರಾಂಶ ಪುನರ್ ಸ್ಥಾಪನೆ: ಸಚಿವ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಒಂದು ವಾರದಿಂದ ತಾಂತ್ರಿಕ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶ ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಈ ತಂತ್ರಾಂಶ ಇದೀಗ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು ಇಸಿ/ಸಿಸಿ ಸೇವೆಗಳ ಮೇಲೆ ಪರಿಣಾಮ ಉಂಟಾಗಿತ್ತು. ಇಂತಹ ಅನಿರೀಕ್ಷಿತ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಗ್ಗಿಸಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಮತ್ತು ಅರ್ಜಿಯನ್ನು ರಕ್ಷಿಸಲು ಇ-ಆಡಳಿತ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದಿದ್ದಾರೆ.
ತಾಂತ್ರಿಕ ದಾಳಿಯ ಕಾರಣಕ್ಕೆ ಫೆ.1ರಂದು ತಂತ್ರಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಪರಿಣಾಮ ನೋಂದಣಿಗಳ ಸಂಖ್ಯೆ 556ಕ್ಕೆ ಇಳಿದಿತ್ತು. ಸದ್ಯ ಫೆಬ್ರವರಿ 5ರಂದು ನೋಂದಣಿಗಳ ಸಂಖ್ಯೆ 7,225ಕ್ಕೆ ಏರಿಕೆಯಾಗಿದ್ದು, ಸಹಿ ಮಾಡಿದ ಇಸಿ(ಋಣಭಾರ ಪ್ರಮಾಣ ಪತ್ರ) ಸಂಖ್ಯೆ 3903 ಮತ್ತು ನೀಡಲಾದ ಸಿಸಿ ಸಂಖ್ಯೆ 753 ಆಗಿದೆ. ಅಲ್ಲದೆ, ಒಟ್ಟು 62.59 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಕೃಷ್ಣ ಬೈರೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.