ʼಗ್ಯಾರಂಟಿʼ ಪರಿಷ್ಕರಣೆ ವಿಚಾರ : ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು : “ಕೆಲವು ಗ್ಯಾರಂಟಿ ಫಲಾನುಭವಿಗಳು ಮೃತಪಟ್ಟಿದ್ದು, ಸುಮಾರು 100 ಕೋಟಿಯಷ್ಟು ಹಣ ಬೇರೆಯವರಿಗೆ ಹೋಗಿ ದುರ್ಬಳಕೆಯಾಗಿದೆ. ಇನ್ನು ಬೇರೆಯವರ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದಯೇ, ಇಲ್ಲವೇ ಎಂದು ತಿಳಿಯಬೇಕಿದೆ. ಹೀಗಾಗಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಚರ್ಚೆ ಮಾಡುವ ಬಗ್ಗೆ ಸಲಹೆ ಬಂದಿದೆ. ಪ್ರತಿ ತಾಲ್ಲೂಕಿನಲ್ಲಿ ಇದನ್ನು ಪರಿಶೀಲನೆ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ʼಗ್ಯಾರಂಟಿ ಪರಿಷ್ಕರಣೆʼ ಮಾಡಲಾಗುವುದೇ ಎಂದು ಮಾಧ್ಯಮದವರು ಕೇಳಿದಾಗ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
2 ತಿಂಗಳಿನಿಂದ ಅನ್ನಭಾಗ್ಯ ಅಕ್ಕಿ ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, “ಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ನಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ನೀವು ದೆಹಲಿ ಪ್ರವಾಸ ಮಾಡುತ್ತೀರಾ ಎಂದು ಕೇಳಿದಾಗ, “ನಮ್ಮನ್ನು ಕರೆದರೆ ಹೋಗುತ್ತೇವೆ. ಸುರ್ಜೆವಾಲ ಅವರು ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ದೆಹಲಿಗೆ ಬನ್ನಿ ಎಂದರೆ ನಾನು ಹೋಗುತ್ತೇನೆ. ಇಲ್ಲವಾದರೆ ಇಲ್ಲೇ ಉಳಿಯುತ್ತೇನೆ. ಪಕ್ಷ ಕರೆದಾಗ ನಾವು ಹೋಗಲೇಬೇಕಾಗುತ್ತದೆ” ಎಂದು ತಿಳಿಸಿದರು.
ಸಿಎಂ ಸ್ಥಾನ ವಿಚಾರವಾಗಿ ಚರ್ಚೆ ನಡೆಯುವುದೇ ಎಂದು ಕೇಳಿದಾಗ, “ನನಗೆ ಅದರ ಬಗ್ಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ (ಮೇ 24) ನಡೆದ ಎಸ್ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದ್ದು, ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಪರಿಶೀಲಿಸಲು ಸರಕಾರ ಮುಂದಾಗಿದೆ ಎನ್ನಲಾಗಿದೆ.






