ಬೆಂಗಳೂರು ಬಂದ್ ಹಿಂಪಡೆದ ರಿಕ್ಷಾ, ಟ್ಯಾಕ್ಸಿ, ಖಾಸಗಿ ಸಾರಿಗೆ ಸಂಘಟನೆಗಳು
►► ಬೇಡಿಕೆ ಈಡೇರಿಕೆಗೆ ಆ.10ರ ವರೆಗೆ ಗಡುವು

ಬೆಂಗಳೂರು, ಜು.24: ಆಟೋ, ಟ್ಯಾಕ್ಸಿ ಚಾಲಕ ಸೇರಿ ಖಾಸಗಿ ಸಾರಿಗೆ ವಾಹನಗಳ ಮಾಲಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರಕ್ಕೆ ಆ.10ರ ವರೆಗೆ ಗಡುವು ನೀಡಿದ್ದು, ಜು.27ರಂದು ನಡೆಯಬೇಕಿದ್ದ ‘ಬೆಂಗಳೂರು ಬಂದ್’ ಅನ್ನು ಹಿಂಪಡೆಯಲಾಗಿದೆ ಎಂದು ಖಾಸಗಿ ಸಾರಿಗೆ ವಾಹನಗಳ ಚಾಲಕ ಮತ್ತು ಮಾಲಕರ ಒಕ್ಕೂಟದ ಮುಖಂಡ ನಟರಾಜ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಕೆಯ ಬಗ್ಗೆ ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸಲು ಸರಕಾರಕ್ಕೆ ಆ.10ರ ವರೆಗೆ ಕಾಲಾವಕಾಶ ನೀಡಲಾಗಿದೆ. ಬೇಡಿಕೆ ಈಡೇರಿಸಿದ್ದರೆ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದರು.
ರಾಜ್ಯ ಸರಕಾರ ಜಾರಿ ಮಾಡಿದ್ದ ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್, ಆಟೋ ಟ್ಯಾಕ್ಸಿ ಮಾಲಕರಿಗೆ ಭಾರೀ ಹೊಡೆತ ನೀಡಿದೆ. ಹಾಗಾಗಿ ಆಟೋ, ಟ್ಯಾಕ್ಸಿ ಚಾಲಕ ಸೇರಿ ಖಾಸಗಿ ಸಾರಿಗೆ ವಾಹನಗಳ ಚಾಲಕರಿಗೆ ಪರಿಹಾರವನ್ನು ನೀಡಬೇಕು ಎಂದು ಸರಕಾರಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ಅವರು ಹೇಳಿದರು.







