ರಿಂಗ್ ರೋಡ್ ಶುಭಾ ಪ್ರಕರಣ: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ

ಬೆಂಗಳೂರು : ತೀವ್ರ ಚರ್ಚೆಗೆ ಗ್ರಾಮವಾಗಿರುವ ರಿಂಗ್ ರೋಡ್ ಶುಭಾ ಕ್ಷಮಾದಾನದ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕೊಲೆ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಶುಭಾ ಮತ್ತು ಆಕೆಯ ಗೆಳೆಯ ಅರುಣ್, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದ ಕುರಿತು ಚರ್ಚೆ ನಡೆಸಿ ಕ್ಷಮಾದಾನ ನೀಡದಿರಲು ತೀರ್ಮಾನಿಸಿದೆ.
ಏನಿದು ಪ್ರಕರಣ?: 2003ರಲ್ಲಿ ಬೆಂಗಳೂರಿನ ರಿಂಗ್ ರೋಡ್ನಲ್ಲಿ ನಡೆದ ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಗಿರೀಶ್ ಮತ್ತು ಶುಭಾ ಶಂಕರನಾರಾಯಣ ಅವರ ವಿವಾಹ ನಿಶ್ಚಯವಾಗಿ, 2003ರ ನವೆಂಬರ್ 30ರಂದು ನಿಶ್ಚಿತಾರ್ಥ ನಡೆದಿತ್ತು. ಗಿರೀಶ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶುಭಾ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು.
ಆದರೆ ಶುಭಾ ತನ್ನ ಕಾಲೇಜಿನ ಜೂನಿಯರ್ ವಿದ್ಯಾರ್ಥಿಯಾಗಿದ್ದ ಅರುಣ್ ವರ್ಮಾನನ್ನು ಪ್ರೀತಿಸುತ್ತಿದ್ದಳು. ಅರುಣ್ನ ಮದುವೆಯಾಗುವ ಉದ್ದೇಶದಿಂದ ಗಿರೀಶ್ ಕೊಲೆಗೆ ಸಂಚು ರೂಪಿಸಿದ್ದಳು. 2003ರ ಡಿಸೆಂಬರ್ 3ರ ರಾತ್ರಿ ಗಿರೀಶ್ ತಮ್ಮ ಭಾವಿ ಪತ್ನಿ ಶುಭಾಳನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ವೀಕ್ಷಿಸುವ ಆಸೆಯನ್ನು ಶುಭಾ ವ್ಯಕ್ತಪಡಿಸಿದ್ದರಿಂದ, ಗಿರೀಶ್ ಅವರನ್ನು ರಿಂಗ್ ರೋಡ್ನ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.
ಇಬ್ಬರೂ ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಮೇಲೆ ದಾಳಿ ನಡೆದಿತ್ತು. ಆರೋಪಿಗಳು ಬೈಕ್ನ ಶಾಕ್ ಅಬ್ಸಾರ್ಬರ್ನಿಂದ ಅವರ ತಲೆಗೆ ಹೊಡೆದಿದ್ದರು ಎಂಬುದು ಪ್ರಕರಣದ ವಿವರಗಳಲ್ಲಿ ಉಲ್ಲೇಖವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು.
ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎ. ನಾನಯ್ಯ ಪ್ರಕರಣದ ತನಿಖೆ ನಡೆಸಿದ್ದರು. ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಪ್ರಮುಖ ಸುಳಿವುಗಳು ಲಭಿಸಿದ್ದವು. ಆ ಕಾಲದಲ್ಲಿ ಕರೆಗಳ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಲಾಗಿತ್ತು.
ಜುಲೈ 2010 ರಲ್ಲಿ ಸ್ಥಳೀಯ ನ್ಯಾಯಾಲಯವು ನಾಲ್ವರನ್ನೂ ದೋಷಿಗಳು ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅಪರಾಧಿಗಳು ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಜೀವಾವಧಿ ಶಿಕ್ಷೆಯ ಆದೇಶವನ್ನು ಎತ್ತಿಹಿಡಿದಿತ್ತು. 2012ರಲ್ಲಿ, ಶುಭಾ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು ಮತ್ತು ಜಾಮೀನು ಪಡೆದಿದ್ದಳು. ನಂತರ, ಇತರರೂ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ, 2025ರ ಜುಲೈ 14ರಂದು ಸುಪ್ರೀಂಕೋರ್ಟ್ ನಾಲ್ವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.






