ಬೆಂಗಳೂರಿನ ರಸ್ತೆಗುಂಡಿಗಳು ಬಿಜೆಪಿ ದುರಾಡಳಿತದ ಫಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಂಗಳೂರು ರಸ್ತೆಗಳ ಗುಂಡಿಗಳು ಬಿಜೆಪಿ ಸರ್ಕಾರದ ದುರಾಡಳಿತದ ಪರಿಣಾಮ. ಅವುಗಳನ್ನು ಮುಚ್ಚಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಗರದಲ್ಲಿ ರಸ್ತೆ ಗುಂಡಿಗಳಿರುವುದು ಸತ್ಯ. ಅವುಗಳನ್ನು ಮುಚ್ಚಲು ಕೆಲಸ ನಡೆಯುತ್ತಿದೆ. ಸಾರ್ವಜನಿಕರು ಮತ್ತು ಪೊಲೀಸರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲು ನಾನು ಮನವಿ ಮಾಡಿದ್ದೇನೆ. ಬಿಜೆಪಿ ಪ್ರತಿಭಟನೆ ನಡೆಸುವುದು ಅನವಶ್ಯ. ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಯಾವುದೇ ಅನುದಾನ ಸಿಗಲಿಲ್ಲ. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರೂ ಸೂಕ್ತ ನೆರವು ದೊರಕಿಲ್ಲ. ಆದರೂ ಬೆಂಗಳೂರಿನ ಅಭಿವೃದ್ಧಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಉದ್ಯಮಿಗಳ ಜೊತೆ ಚರ್ಚೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ, ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
1994ರಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೈರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಅವರ ಬರವಣಿಗೆ, ಮಾತು ಸದಾ ನೇರ ನುಡಿಯಿಂದ ಕೂಡಿತ್ತು. ಅವರ ಕಾದಂಬರಿಗಳು ಅನೇಕ ವಿದೇಶಿ ಭಾಷೆಗಳಿಗೆ ಭಾಷಾಂತರಗೊಂಡು, ಚಿತ್ರಗಳಾಗಿ ಮೂಡಿಬಂದಿವೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದ ಭೈರಪ್ಪರಿಗೆ ರಾಷ್ಟ್ರ ಪ್ರಶಸ್ತಿ ಮತ್ತು ಪದ್ಮ ಪ್ರಶಸ್ತಿಗಳು ದೊರೆತಿವೆ. ಅವರ ಸಿದ್ಧಾಂತ, ನಿಲುವು ಮತ್ತು ನಡೆ ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ, ಸಮಾಜದ ಎಲ್ಲಾ ವರ್ಗಗಳಿಗೆ ಮಾರ್ಗದರ್ಶನವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಮನವಿ ಬಗ್ಗೆ ಕೇಳಿದಾಗ, ಮನವಿಗಳು ಬಂದಿವೆ, ಈ ವಿಚಾರದಲ್ಲಿ ವೈಯಕ್ತಿಕವಾಗಿ ನಾನು ತೀರ್ಮಾನ ಮಾಡಲು ಆಗುವುದಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಯವರು ಎಲ್ಲರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವು ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
.
ಬಿಹಾರದ ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯ ನಿರ್ಣಯಗಳ ಕುರಿತು ಕೇಳಿದಾಗ, ಈ ವಿಷಯದ ಬಗ್ಗೆ ಇಂದು ಮಾತನಾಡುವುದಿಲ್ಲ. ಆದರೆ ಸಂವಿಧಾನಬದ್ಧ ಹಕ್ಕಾದ ‘ಒಬ್ಬರಿಗೆ ಒಂದು ಮತ’ದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.







