ಪುಲಿಟ್ಜರ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಗೌರಿ ಲಂಕೇಶ್ ಕುರಿತ ಪುಸ್ತಕ

ಪತ್ರಕರ್ತೆ ಗೌರಿ ಲಂಕೇಶ್
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತು ಅಮೆರಿಕದ ಪತ್ರಕರ್ತ ರೊಲೊ ರೋಮಿಂಗ್ ಅವರು ಬರೆದ ‘ಐ ಆ್ಯಮ್ ಆನ್ ದಿ ಹಿಟ್ ಲಿಸ್ಟ್’ ಪುಸ್ತಕವು ಪುಲಿಟ್ಜರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಸ್ಥಾನ ಪಡೆದಿತ್ತು.
'ಜನರಲ್ ನಾನ್–ಫಿಕ್ಷನ್’ ವಿಭಾಗದಲ್ಲಿ ಈ ಪುಸ್ತಕವು ಪ್ರಶಸ್ತಿಗೆ ಪರಿಗಣಿತವಾಗಿತ್ತು. ಆದರೆ ಈ ಕೃತಿಗಿಂತಲೂ, ಬೆಂಜಮಿನ್ ನ್ಯಾಥನ್ಸ್ ಅವರು ಬರೆದ ‘ಟು ದಿ ಸಕ್ಸಸ್ ಆಫ್ ಅವರ್ ಹೋಪ್ಲೆಸ್ ಕಾಸ್’ ಕೃತಿಗೆ ಹೆಚ್ಚಿನ ಮನ್ನಣೆ ದೊರೆತ ಕಾರಣಕ್ಕೆ ಅದಕ್ಕೆ ಪುಲಿಟ್ಜರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಗೌರಿ ಹತ್ಯೆಯ ತನಿಖೆಯ ಕುರಿತಾದ ಈ ಪುಸ್ತಕವು ಅವರ ಬದುಕಿನ ಬಗೆಗಿನ ವಿವರಗಳನ್ನೂ ಒಳಗೊಂಡಿದೆ.
‘ಈ ಪುಸ್ತಕದಲ್ಲಿ ‘ಜಾಗತಿಕವಾಗಿ ಕಂಡುಬರುವ ವಿಷಯವಸ್ತುಗಳಾದ ಸರ್ವಾಧಿಕಾರ, ಮೂಲಭೂತವಾದ ಮತ್ತು ಮುಕ್ತ ಅಭಿವ್ಯಕ್ತಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ’, ಎಂದು ಪುಲಿಟ್ಜರ್ ಪ್ರಶಸ್ತಿ ಮಂಡಳಿಯು ಹೇಳಿದೆ.
ಗೌರಿ ಲಂಕೇಶ್ ಅವರನ್ನು 2017ರಲ್ಲಿ ಅವರ ಮನೆಯ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕಲೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯವು ಪುಲಿಟ್ಜರ್ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿದೆ. ಜೋಸೆಫ್ ಪುಲಿಟ್ಜರ್ ಅವರ ಇಚ್ಛೆಯ ಮೇರೆಗೆ 1917 ರಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ.







