ಸುವರ್ಣ ವಿಧಾನಸೌಧದಲ್ಲಿ ಗಣ್ಯರ ಭಾವಚಿತ್ರ ಸರಿಪಡಿಸಲು ಬಸವರಾಜ ರಾಯರಡ್ಡಿ ಮನವಿ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದ ಸಭಾಭವನದಲ್ಲಿ ಅಳವಡಿಸಿರುವ ಬಸವೇಶ್ವರ, ಸುಭಾಷ್ ಚಂದ್ರ ಬೋಸ್, ಡಾ.ಅಂಬೇಡ್ಕರ್ ಅವರ ಭಾವಚಿತ್ರ ಬದಲಾವಣೆ ಹಾಗೂ ಡಾ.ಬಾಬು ರಾಜೇಂದ್ರ ಪ್ರಸಾದ್, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಎಸ್.ನಿಜಲಿಂಗಪ್ಪ ಹಾಗೂ ಕೆಂಗಲ್ ಹನುಮಂತಯ್ಯನವರ ಭಾವಚಿತ್ರ ಅಳವಡಿಸುವಂತೆ ಕಾಂಗ್ರೆಸ್ ಶಾಸಕ ಬಸವರಾಜರಾಯರಡ್ಡಿ ಮನವಿ ಮಾಡಿದ್ದಾರೆ.
ಸೋಮವಾರ ಈ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿರುವ ಅವರು, ಕಲ್ಯಾಣ ರಾಜ್ಯದಲ್ಲಿ ಪ್ರಧಾನಮಂತ್ರಿಯಾಗಿ ಜಾತಿ, ಬೇಧ-ಭಾವ ನೋಡದೆ ಮಾನವೀಯ ಮೌಲ್ಯಗಳನ್ನು ಬೋಧಿಸಿ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಬಸವೇಶ್ವರರ ಹಾಲಿ ಇರುವ ಭಾವಚಿತ್ರದ ಬದಲಾಗಿ ಕಿರೀಟ ಧರಿಸಿರುವ ಭಾವಚಿತ್ರವನ್ನು ಹಾಕಬೇಕು ಎಂದು ಕೋರಿದ್ದಾರೆ.
ದೋತಿ ಹಾಗೂ ಶರ್ಟ್ ಧರಿಸಿರುವ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು ಬದಲಾಯಿಸಿ ಸೇನಾ ಸಮವಸ್ತ್ರದಲ್ಲಿರುವ ಭಾವಚಿತ್ರ ಅಳವಡಿಸಬೇಕು. ಡಾ.ಅಂಬೇಡ್ಕರ್ ಅವರ ಭಾವಚಿತ್ರ ನಿಜ ರೂಪದಲ್ಲಿಲ್ಲ. ಆದುದರಿಂದ, ಅವರ ಭಾವಚಿತ್ರ ಬದಲಾಯಿಸಿ ಸಂವಿಧಾನದ ಪುಸ್ತಕ ಹಿಡಿದಿರುವ ಭಾವ ಚಿತ್ರವನ್ನು ಅಳವಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್, ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಏಕೀಕರಣದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಹಾಗೂ ಬೆಂಗಳೂರಿನಲ್ಲಿ ವಿಧಾನಸೌಧ ಕಟ್ಟಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಬಸವರಾಜ ರಾಯರಡ್ಡಿ ಮನವಿ ಮಾಡಿದ್ದಾರೆ.







