42 ಕೋಟಿ ರೂ.ನಗದು ಪತ್ತೆ ಪ್ರಕರಣ: ಆದಾಯ ದಾಖಲೆ ಉಲ್ಲೇಖಿಸುವಂತೆ ನೋಟಿಸ್

ಬೆಂಗಳೂರು, ಅ.14: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ನಿವಾಸದ ಮೇಲೆ ದಾಳಿ ಪ್ರಕರಣ ಸಂಬಂಧ ಶೋಧ ಕಾರ್ಯ ಪೂರ್ಣಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರಿಗೆ ನೋಟಿಸ್ ಜಾರಿಗೊಳಿಸಿ ಆದಾಯ ಮೂಲಗಳ ಕುರಿತು ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಪ್ರಮುಖವಾಗಿ ಮೆಟ್ರೋ ಕಾರ್ಪ್ ಕಂಪೆನಿ ಪಾಲುದಾರರಾಗಿರುವ ಪ್ರಮೋದ್ ಹಾಗೂ ಅಂಬಿಕಾಪತಿ ಪುತ್ರ ಪ್ರದೀಪ್‍ಗೆ ನೋಟಿಸ್ ನೀಡಲಾಗಿದೆ. ಇನ್ನೂ, ಅ.17ರಂದು ವಿಚಾರಣೆಗೆ ಹಾಜರಾಗಬೇಕೆಂದು ಸಹ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿರುವ ನಿವಾಸ, ಆತ್ಮಾನಂದ ಲೇಔಟ್ ಮನೆ ಸೇರಿದಂತೆ ವಿವಿಧೆಡೆ ಕಳೆದ 42 ಗಂಟೆಗಳಿಂದ ಐಟಿ ಅಧಿಕಾರಿಗಳು ನಡೆದ ಪರಿಶೀಲನೆ ಅಂತ್ಯವಾಗಿದ್ದು, ಮಹತ್ವದ ದಾಖಲೆಗಳೊಂದಿಗೆ ಪಂಚನಾಮೆ ಕಾರ್ಯ ಪೂರ್ಣಗೊಳಿಸಿ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಗೊತ್ತಾಗಿದೆ.
ಐಟಿ ದಾಳಿ ಅಂತ್ಯ ಬಳಿಕ ಅಂಬಿಕಾಪತಿ ಪುತ್ರ ಪ್ರದೀಪ್ ಪ್ರತಿಕ್ರಿಯಿಸಿ, ‘ಹದಿನೈದು ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ವ್ಯಾಪಾರದಲ್ಲಿ ತೊಡಗಿಕೊಂಡಿದ್ದೇವೆ. ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡುತ್ತೇವೆ. ಅಲ್ಲದೆ, ಯಾವುದೇ ಹವಾಲ ಹಣ ಅಲ್ಲ, ಐಟಿ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲಾತಿ ಒದಗಿಸುತ್ತೇವೆ’ ಎಂದು ಸ್ಪಷ್ಟಣೆ ನೀಡಿದರು.







