11,910 ಕಿರು ಆಹಾರ ಸಂಸ್ಕರಣಾ ಉದ್ಯಮ ಸ್ಥಾಪನೆಗೆ 493 ಕೋಟಿ ರೂ. ಬಿಡುಗಡೆ: ಚಲುವರಾಯಸ್ವಾಮಿ
"ರಾಜ್ಯದಲ್ಲಿ ರಸಗೊಬ್ಬರ-ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ"

ಎನ್.ಚಲುವರಾಯಸ್ವಾಮಿ
ಬೆಂಗಳೂರು: ಕೇಂದ್ರದ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, 5 ವರ್ಷಗಳವರೆಗೆ ಇದಕ್ಕೆ ಒಟ್ಟು 493 ಕೋಟಿರೂ. ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಿಎಂಎಫ್ಎಂಇ ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಅಸಂಘಟಿತ ವಲಯದಲ್ಲಿರುವ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಈ ಯೋಜನೆಯು ವೈಯಕ್ತಿಕ ಆಹಾರ ಸಂಸ್ಕರಣಾ ಉದ್ಯಮಿಗಳು ಮತ್ತು ರೈತರ ಗುಂಪುಗಳು ಎಫ್ಪಿಒಗಳಿಗೆ ಶೇ.35 ರಷ್ಟು (60:40, ಅನುಪಾತ) ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ರಾಜ್ಯದ ಫಲಾನುಭವಿಗಳಿಗೆ ಹೆಚ್ಚು ಆಕರ್ಷಕವಾಗಿಸಲು ರಾಜ್ಯ ಸರಕಾರ ಶೇ.15 ರಷ್ಟು ಹೆಚ್ಚುವರಿ ಟಾಪ್ ಅಪ್ ಸಬ್ಸಿಡಿಯನ್ನು ಒದಗಿಸಿದೆ ಎಂದು ತಿಳಿಸಿದರು.
ಈ ಯೋಜನೆಯಡಿ 5 ವರ್ಷಗಳಲ್ಲಿ ರಾಜ್ಯದಲ್ಲಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,698 ಅರ್ಜಿಗಳಿಗೆ ಸಾಲ ಮಂಜೂರಾಗಿರುತ್ತದೆ. ಇದಕ್ಕೆ ಒಟ್ಟು ರೂ. 785.48 ಕೋಟಿಯಷ್ಟು ಬಂಡವಾಳ ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿರುತ್ತದೆ. 162.50 ಕೋಟಿ ರೂಪಾಯಿಗಳ ಸಹಾಯಧನವನ್ನು (60:40 ಅನುಪಾತದೊಂದಿಗೆ ಶೇ.35 ರಷ್ಟು) 4,489 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಹಾಗೇ, ಹೆಚ್ಚುವರಿ ಶೇ.15 ರಷ್ಟು ಟಾಪ್ ಅಪ್ ಸಬ್ಸಿಡಿಯನ್ನು 59.48 ರೂಪಾಯಿಗಳನ್ನು 3770 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಅವರು ವಿವರಿಸಿದರು.
ಪ್ರಮುಖವಾಗಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರಸ್ಡ್ ಆಯಿಲ್, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕೋಳಿ ಮತ್ತು ಸಮುದ್ರ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಘಟಕಗಳ ಸ್ಥಾಪನೆಗಾಗಿ ಸಾಲವನ್ನು ಮಂಜೂರು ಮಾಡಲಾಗಿದೆ.
ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವ-ಸಹಾಯ ಸಂಘದ 11825 ಸದಸ್ಯರಿಗೆ 46.58 ಕೋಟಿಯಷ್ಟು ಬೀಜ ಬಂಡವಾಳದ ಬೆಂಬಲವನ್ನು ಸಣ್ಣ ಉಪಕರಣಗಳನ್ನು ಖರೀದಿಸಲು ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದ ಅವರು, ರಾಜ್ಯದ ವಿಜಯಪುರ ಮತ್ತು ಕುಷ್ಟಗಿಯಲ್ಲಿ ಹಾಗೂ ಹುಮನಾಬಾದ್ ನಲ್ಲಿ ದ್ರಾಕ್ಷಿ, ದಾಳಿಂಬೆ, ನಿಂಬೆ ತೋಟಗಾರಿಕೆ ಸಂಸ್ಕರಣೆ ಹಾಗೂ ರಫ್ತಿನ ಅನುಕೂಲಕ್ಕೋಸ್ಕರ ಸಮಗ್ರ ಶೀತಲ ಸರಪಳಿ ಘಟಕಗಳು ಕಾರ್ಯಾಚರಣೆಯಲ್ಲಿವೆ ಎಂದರು.
ವಿಜಯಪುರದಲ್ಲಿ ರೈತರು ಸಂಸ್ಕರಿಸಿದ ಒಣ ದ್ರಾಕ್ಷಿ ಹಾಗೂ ಇತರೇ ಕೃಷಿ, ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಸುಮಾರು 4000 ಮೆಟ್ರಿಕ್ ಟನ್ ಸಾರ್ಮಥ್ಯದ ಶೀತಲಗೃಹ ಕಾರ್ಯಾಚರಣೆಯಲ್ಲಿದ್ದು, ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿ ಸುಮಾರು 6,000 ಮೆಟ್ರಿಕ್ ಟನ್ ಸಾರ್ಮಥ್ಯದ ಗೋದಾಮು ಕಾರ್ಯಚರಣೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ್, ಕೆಪೆಕ್ ಅಧ್ಯಕ್ಷ ಹರೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ರಸಗೊಬ್ಬರ-ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ: ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇ.60 ರಷ್ಟು ಬಿತ್ತನೆಯಾಗಿದ್ದು, ಈವರೆಗೆ 80 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಮುಂದಿನ ತಿಂಗಳು ಕೆಲವು ಕಡೆ ಬಿತ್ತನೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.