ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಇಡುಗಂಟು ಸೌಲಭ್ಯ : ಸರಕಾರ ಆದೇಶ

ಬೆಂಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಇಡುಗಂಟು ನೀಡಲು ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಇಡುಗಂಟು ಯೋಜನೆಯು 2024 ಜನವರಿ 1ರಿಂದ ಜಾರಿಗೆ ಬರಲಿದ್ದು, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡು ಗಂಟು ಯೋಜನೆ ಅನ್ವಯಿಸಲಿದೆ.
ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಈ ಯೋಜನೆಗೆ ಒಳಪಡಲಿದ್ದಾರೆ. ಈ ಯೋಜನೆಗೆ ಒಟ್ಟಾರೆ 44.15 ಕೋಟಿ ರೂಪಾಯಿಗಳನ್ನು ಸರಕಾರ ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಇಡುಗಂಟು ಸೌಲಭ್ಯವನ್ನು ಕ್ಲೇಮ್ ಮಾಡುವ ಅತಿಥಿ ಉಪನ್ಯಾಸಕರು ಸರಕಾರ ಅಥವಾ ಸರಕಾರದ ಅನುದಾನಕ್ಕೊಳಪಟ್ಟ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸಿದ್ದಲ್ಲಿ ಅಂತಹ ಅತಿಥಿ ಉಪನ್ಯಾಸಕರಿಗೆ ಈ ಇಡಿಗಂಟು ಯೋಜನೆಯು ಅನ್ವಯವಾಗುವುದಿಲ್ಲ.
ಇಡುಗಂಟು ಯೋಜನೆಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಆಯಾ ಕಾಲೇಜು ಪ್ರಾಂಶುಪಾಲರು ನಿಗದಿತ ನಮೂನೆಯಲ್ಲಿ ನೀಡಿದ ಸೇವಾ ಪ್ರಮಾಣ ಪತ್ರಗಳ ಆಧಾರದಲ್ಲಿ ಲೆಕ್ಕ ಹಾಕಲಾಗುವುದು. ಇಡುಗಂಟು ಯೋಜನೆಯು ಪ್ರತಿ ವರ್ಷಕ್ಕೆ 50 ಸಾವಿರ ರೂ. ದರದಲ್ಲಿದ್ದು, ಅತಿಥಿ ಉಪನ್ಯಾಸಕರ ಸೇವೆಯ ವರ್ಷಗಳ ಸಂಖ್ಯೆಗೆ ಅನುಗುಣವಾಗಿದೆ. ಇಡುಗಂಟಿನ ಗರಿಷ್ಠ ಮೌಲ್ಯ 5 ಲಕ್ಷ ರೂ. ಆಗಿರುತ್ತದೆ.







